ಕಣವಿ ತಿಮ್ಮಲಾಪುರದಲ್ಲಿ ಶಾಸನಗಳು ಪತ್ತೆ

22 KAMPLI 06
ಕಣವಿ ತಿಮ್ಮಲಾಪುರದಲ್ಲಿ ಅಂಗನವಾಡಿ ಬಳಿ ದೊರೆತ ಶಾಸನ.
Published on

ಕಂಪ್ಲಿ: ಕಣವಿ ತಿಮ್ಮಲಾಪುರ ಗ್ರಾಮದಲ್ಲಿ ಎರಡು ಅಪ್ರಕಟಿತ ಶಾಸನಗಳು ಪತ್ತೆಯಾಗಿದ್ದು, ವಿಜಯನಗರ ಅರಸರ ಕಾಲದ್ದು ಎನ್ನಲಾಗಿದೆ.

ಸಂಶೋಧಕ ಡಾ.ನರಸಿಂಹ ತಿಮ್ಮಲಾಪುರ, ನಾಗರಾಜ ಅವರ ನೆರವಿನೊಂದಿಗೆ ವಿಜಯನಗರ ತಿರುಗಾಟ ಸಂಶೋಧನ ತಂಡದ ಪ್ರೊ.ಎಚ್.ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣಗೌಡ, ಡಾ.ವೀರಾಂಜನೇಯ, ಎಚ್.ರವಿ ಶಾಸನಗಳನ್ನು ಪತ್ತೆ ಮಾಡಿದ್ದಾರೆ. ಅಂಗನವಾಡಿ ಬಳಿ 12 ಅಡಿ ಎತ್ತರ 5 ಅಡಿ ಅಗಲದ ಶಾಸನವಿದ್ದು, ಕನ್ನಡ ಭಾಷೆಯ 33 ಸಾಲುಗಳಿವೆ. ಶಾಸನದ ಮೇಲ್ಭಾಗದಲ್ಲಿ ಸೂರ್ಯ, ಚಂದ್ರ, ಶಂಖ, ಚಕ್ರ, ವಿಷ್ಣುನಾಮದ ಚಿಹ್ನೆ ಇದೆ.

ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ತಿಮ್ಮಲಾಪುರದ ಪಾಳೆಯಗಾರ ನಾಗಲಬೋವನ ಮಕ್ಕಳಾದ ಊಳಿಗದ ಹಿರಿಯಗದ್ದಯ್ಯ ಮತ್ತು ಚಿಕ್ಕಗದ್ದಯ್ಯ ಅವರು ಕೃಷ್ಣದೇವರಾಯ ಮತ್ತು ಆತನ ರಾಣಿ ತಿರುಮಲಾಂಬ ಹೆಸರಿನಲ್ಲಿ ಪಟ್ಟಣ ಕಟ್ಟಿಸಿ, ಸಂತೆಯಿಂದ ಬಂದ ಆದಾಯದಿಂದ ಮಲ್ಲಿಕಾರ್ಜುನ ಮತ್ತು ಹನುಮಂತ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿರುವುದು, ಸಾಳುವ ತಿಮ್ಮರಸನ ಸೂಚನೆಯಂತೆ ವಿಠಲಾಪುರದ ತುಂಬಿನ ಬಾವಿಯ ಕೆಳಗಿನ ಆಯಕಟ್ಟೆ ಗದ್ದೆಯನ್ನು ದಾನ ನೀಡಿದ ಉಲ್ಲೇಖವಿದೆ.

ಕಾಲುವೆ ಬಳಿಯ ಗದ್ದೆಯೊಂದರಲ್ಲಿ ಹುಟ್ಟು ಬಂಡೆಗೆ ಶಾಸನ ಬರೆಸಿದ್ದು, ಸೂರ್ಯ, ಚಂದ್ರರ ಚಿಹ್ನೆಗಳಿವೆ. ಈ ಶಾಸನದ ಬಹುತೇಕ ಅಕ್ಷರಗಳು ಸವೆದು ಹೋಗಿವೆ. ಅಲ್ಲಲ್ಲಿ ತೆಲುಗು ಭಾಷೆಯ ಪದಗಳನ್ನು ಬಳಸಿರುವುದು ವಿಶೇಷವಾಗಿದೆ. ಪ್ರತಿ ಸಾಲಿನ ಕೆಳಗೆ ಗೆರೆಯನ್ನು ಹಾಕಲಾಗಿದೆ. ಇವುಗಳ ಸಂರಕ್ಷಿಸುವ ಅಗತ್ಯವಿದೆ. ಶಾಸನ ಅಧ್ಯಯನದಿಂದ ಕಣವಿ ತಿಮ್ಮಲಾಪುರದ ಇತಿಹಾಸ ಅರಿಯಲು ಸಾಧ್ಯವಿದೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಪ್ರೊ.ತಿಪ್ಪೇಸ್ವಾಮಿ, ಡಾ.ಗೋವಿಂದ, ಸಂಶೋಧಕ ಡಾ.ನರಸಿಂಹ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net