ಜಿಲ್ಲೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ: ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ಪಂದನೆ

DSC_4893
Published on

ತುಮಕೂರು : ಕಲ್ಪತರು ನಾಡಿನಲ್ಲಿ ಕನ್ನಡ ಕಂಪು ಪಸರಿಸುವ ಗೀತ ಗಾಯನಕ್ಕೆ ಲಕ್ಷಾಂತರ ಕಂಠಗಳು ಕೊರಳಾದವು. ಸಿದ್ಧಗಂಗಾ ಮಠ ಸೇರಿ ಜಿಲ್ಲೆಯೆಲ್ಲ್ಲೆಡೆ ಕನ್ನಡ ಡಿಂಡಿಮ ಮೊಳಗಿತು. ಮಠದ ಅಂಗಳದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಕ್ಕಳು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟಬೇಕು...ಹಾಡಿಗೆ ಧ್ವನಿಯಾದರು.

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ 11ರಿಂದ 11.30ರವರೆಗೆ ಕನ್ನಡ ಗೀತೆಗಳ ಗಾಯನವನ್ನು ಏಕಕಾಲದಲ್ಲಿ ಜಿಲ್ಲೆಯೆಲ್ಲ್ಲೆಡೆ ಹಮ್ಮಿಕೊಳ್ಳಲಾಗಿತ್ತು. ಶ್ರೀಮಠದಲ್ಲಿ ಸಿದ್ದಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’, ನಾಡೋಜ ಡಾ. ಕೆ.ಎಸ್.ನಿಸಾರ್ ಅಹಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಮೂರು ಗೀತೆಗಳನ್ನು ಮಠದ ಹತ್ತು ಸಾವಿರ ಮಕ್ಕಳು ಒಂದೆಡೆ ಹಾಡುವ ಮೂಲಕ ಗಾನಲೋಕ ಸೃಷ್ಟಿಸಿದರು. ಪ್ರತಿ ಗೀತೆಗಳ ನಂತರ ವಿದ್ಯಾರ್ಥಿಗಳು ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ ಕನ್ನಡಕ್ಕಾಗಿ ನಾವು, ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯಗಳನ್ನು ಕೂಗುವ ಮೂಲಕ ಕನ್ನಡ ಕಹಳೆ ಮೊಳಗಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಸ್ಪಿ ರಾಹುಲ್ ಕುಮಾರ್ ಶಹಾಪೂರವಾಡ್, ಎಡಿಸಿ ಕೆ.ಚೆನ್ನಬಸಪ್ಪ, ಎಸಿ ವಿ.ಅಜಯ್, ಡಿಡಿಪಿಐ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರತಿಜ್ಞಾವಿಧಿ ಬೋಧನೆ : ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನ್ನೇ ಬಳಸುತ್ತೇನೆ ಎಂದು ಪಣತೊಡುತ್ತೇನೆ. ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು-ನುಡಿ, ಸಂಸ್ಕೃತಿ ಹಾಗೂ ಪರಂಪರೆ ಉಳಿಸಲು ಕಟಿಬದ್ಧನಾಗಿರುತ್ತೇನೆಂದು ಸಂಕಲ್ಪ ಮಾಡುತ್ತೇನೆ ಎಂಬ ಪ್ರತಿಜ್ಞಾವಿಧಿಯನ್ನು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಬೋಧಿಸಿದರು.

ನಗರದ ಎಂಪ್ರೆಸ್ ಕಾಲೇಜು, ಜಿಲ್ಲಾಸ್ಪತ್ರೆ ಸಭಾಂಗಣ, ತುಮಕೂರು ವಿವಿ ಸಭಾಂಗಣ, ಸಿದ್ಧಗಂಗಾ ಕಲೆ, ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ದರ್ಜೆ ಕಾಲೇಜು; ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜು, ಸೇಂಟ್ ಮೇರಿಸ್ ಆಂಗ್ಲ ಶಾಲೆ, ಕ್ಯಾತಸಂದ್ರ ಬಳಿಯ ಶ್ರೀ ಚೈತನ್ಯ ಟೆಕ್ನೋ ಶಾಲೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಿಯು ಕಾಲೇಜು, ಸಪ್ತಗಿರಿ ಪಿಯು ಕಾಲೇಜು ಸೇರಿ ಜಿಲ್ಲೆಯಾದ್ಯಂತ ಎಲ್ಲ ಶಾಲಾ, ಕಾಲೇಜು,ಗಡಿ ಪ್ರದೇಶಗಳು, ಸರ್ಕಾರಿ ಕಚೇರಿಗಳ ಮುಂಭಾಗ ಸಾಮೂಹಿಕ ಗೀತ ಗಾಯನ ನಡೆಯಿತು.

ಕರ್ನಾಟಕದಲ್ಲಿ ಆಡಳಿತ ಭಾಷೆ, ಆಡುವ ಭಾಷೆ ಕನ್ನಡವಾಗಬೇಕೆಂಬ ಬಹಳ ವರ್ಷಗಳ ಕನ್ನಡಿಗರ ಕೂಗಿಗೆ ಈ ಅಭಿಯಾನ ಉತ್ತರವಾಗಬೇಕು. ನಾವೆಲ್ಲರೂ ಕನ್ನಡದ ಮೇಲೆ ಪ್ರೀತಿ ಬೆಳೆಸಿಕೊಳ್ಳಬೇಕು. ಎಲ್ಲೇ ಇರಲಿ, ಯಾವುದೇ ಭಾಷೆ ಕಲಿಯಲಿ, ಉಸಿರಾಡುವ ಭಾಷೆ ಕನ್ನಡವಾಗಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಕೆ ಮಾಡಿದರೆ ಭಾಷೆಗೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ ಮಾತೃಭಾಷೆಯಿಂದ ಮಕ್ಕಳ ಮನೋವಿಕಾಸ ಸಾಧ್ಯವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. 2000 ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಕನ್ನಡ ಭಾಷೆ ಶ್ರೀಮಂತ ಭಾಷೆ. ಇತರ ಭಾಷೆಗಿಂತ ಹೃದಯ ಮುಟ್ಟುವ ಶಕ್ತಿ ಕನ್ನಡಕ್ಕಿದ್ದು, ಪ್ರತಿಯೊಬ್ಬರೂ ಕನ್ನಡ ಮಾತನಾಡಬೇಕು. ನೂರು ಭಾಷೆ ಕಲಿತರೂ ಆಡುವ ಭಾಷೆ ಕನ್ನಡವಾಗಬೇಕು. ಬ್ಯಾಂಕಿಂಗ್ ಮತ್ತು ರೈಲ್ವೆ ಇಲಾಖೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡಬೇಕು. ಜಿ.ಬಿ.ಜ್ಯೋತಿಗಣೇಶ್, ನಗರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net