

ಎಂ.ಎನ್. ಸುರೇಶ್ ಕನಕಪುರ
ನಗರದ ಹದಯ ಭಾಗದಲ್ಲಿರುವ ನೂತನ ಸರ್ಕಾರಿ ಹೆರಿಗೆ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಮಾತ್ರ ಇನ್ನೂ ಲಭ್ಯವಿಲ್ಲ.
ಸರ್ಕಾರ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು ಕೋಟ್ಯಂತರ ರೂ. ವೆಚ್ಚ ಮಾಡುತ್ತದೆ. ಆದರೆ, ನಗರದ ಬಸ್ ನಿಲ್ದಾಣದ ಸಮೀಪ ಇರುವ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಿ, ಸುಸಜ್ಜಿತ ಕಟ್ಟಡ ನಿರ್ಮಿಸಿ, ತಾಯಿ ಮಕ್ಕಳ ಆರೈಕೆಗಾಗಿ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ. ಸುಧಾಮೂರ್ತಿ ಅವರು 50 ಕೋಟಿ ರೂ. ನೀಡಿ ಕಟ್ಟಡವನ್ನು ಪೂರ್ಣಗೊಳಿಸಿದ್ದಾರೆ. ಆದರೆ, ರಾಜಕೀಯ ಹಾಗೂ ಇತರ ಕಾರಣಗಳಿಂದಾಗಿ ಆಸ್ಪತ್ರೆ ಉದ್ಘಾಟನೆ ವಿಳಂಬಗೊಂಡಿದ್ದು ಸಹ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿತ್ತು.
ನಂತರ ಫೆಬ್ರವರಿಯಲ್ಲಿ ಆಸ್ಪತ್ರೆ ಉದ್ಘಾಟನೆ ಭಾಗ್ಯ ಕಂಡಿತು. ಆಸ್ಪತ್ರೆ ಉದ್ಘಾಟನೆಯಾಗಿ ನಾಲ್ಕು ತಿಂಗಳು ಕಳೆದರೂ ಸಾರ್ವಜನಿಕ ಸೇವೆಗೆ ಇನ್ನು ಮುಕ್ತವಾಗಿಲ್ಲ. ಉದ್ಘಾಟನೆ ದಿನದಂದು ಆಸ್ಪತ್ರೆ ಬಾಗಿಲು ತೆರೆದು ಬಳಿಕ ಹಾಕಿದ ಬೀಗ ಇದುವರೆಗೂ ತೆರೆದಿಲ್ಲ.
ಉದ್ಘಾಟನೆಯಂದು ಅಂದಿನ ಆರೋಗ್ಯ ಸಚಿವರು ಕಟ್ಟಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಆಸ್ಪತ್ರೆಗೆ ಅಗತ್ಯವಾದ ಎಲ್ಲ ಸಲಕರಣೆ, ಯಂತ್ರೋಪಕರಣಗಳನ್ನು ಅಳವಡಿಸಲು ಒಪ್ಪಿಗೆ ನೀಡಿದ್ದರು. ಸ್ಥಳೀಯ ಶಾಸಕರು, ಸಂಸದರು ಸಹ ಅಂದಿನ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ನಗರದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂಡಿದ್ದರೂ ಸಾರ್ವಜನಿಕರ ಸೇವೆಗೆ ದೊರಕಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ವಿಲರಾಗಿದ್ದು, ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿಯಂತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಶಾಸಕರು, ಸಚಿವರು, ಅಧಿಕಾರಿಗಳು ಸುಸಜ್ಜಿತ ಆಸ್ಪತ್ರೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲು ಗಮನ ಹರಿಸಿ ಹೆಣ್ಣುಮಕ್ಕಳ ಹೆರಿಗೆ ಮತ್ತು ಉತ್ತಮ ಆರೋಗ್ಯಕ್ಕೆ ದಾರಿ ವಾಡಿ ಕೊಡುವರೇ ಕಾದು ನೋಡಬೇಕಿದೆ.
ಕರೆ ಸ್ವೀಕರಿಸದ ಡಿಎಚ್‌ಒ
ಕನಕಪುರ ಆಸ್ಪತ್ರೆ ಉದ್ಘಾಟನೆ ಹಾಗೂ ಸಂಬಂಧಿಸಿದ ವಿಷಯಗಳ ಬಗ್ಗೆ ವಿಜಯವಾಣಿ ಪತ್ರಿಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಾಂತರಾಜು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಪಟ್ಟರೂ ಸಿಗಲಿಲ್ಲ. ವಾಟ್ಸ್‌ಆ್ಯಪ್ ಸಂದೇಶ ರವಾನಿಸಿದರೂ ವಾಹಿತಿ ನೀಡಿಲ್ಲ. ಡಿಎಚ್‌ಒ ಅವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕರೆಯನ್ನು ಸ್ವೀಕರಿಸುವುದಿಲ್ಲ, ಹೀಗಾದರೆ ಆರೋಗ್ಯ ಇಲಾಖೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾದರೂ ಹೇಗೆ ಎನ್ನುವುದು ಸಾರ್ವಜನಿಕರ ಆರೋಪವೂ ಆಗಿದೆ.
ನೂತನ ಆಸ್ಪತ್ರೆ ಉದ್ಘಾಟನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಸದ ಡಿ.ಕೆ. ಸುರೇಶ್ ಶುಕ್ರವಾರ ಆರೋಗ್ಯ ಇಲಾಖೆ ಆಯುಕ್ತರೊಂದಿಗೆ ವಾತುಕತೆ ನಡೆಸಿ ಶ್ರೀವೇ ಚಾಲನೆ ನೀಡಲು ಸೂಚಿಸಿದ್ದಾರೆ.
ಡಾ. ವಾಸು, ಆರೋಗ್ಯ ಆಡಳಿತ ಅಧಿಕಾರಿ, ಕನಕಪುರ
ಸರ್ಕಾರ ಮಾಡದಂತಹ ಸಮಾಜ ಸೇವೆಯ ಮೂಲಕ ಸುಧಾ ಮೂರ್ತಿ ಅವರು 50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಗೆ ಕಟ್ಟಡ ಕಟ್ಟಿಸಿ ಉದ್ಘಾಟನೆಗೊಂಡಿದ್ದರೂ ಸಾರ್ವಜನಿಕ ಸೇವೆಗೆ ಆಸ್ಪತ್ರೆ ಇನ್ನೂ ಸಿಗದಿರುವುದು ವಿಪರ್ಯಾಸ. ಕೂಡಲೇ ಆಸ್ಪತ್ರೆ ಕಾರ್ಯಾರಂಭ ಮಾಡಿ ಸೇವೆಗೆ ಮುಕ್ತಗೊಳಿಸಬೇಕು.
ದೇವರಾಜು, ಅಧ್ಯಕ್ಷ, ರಾಮನಗರ ಜಿಲ್ಲಾ ರೈತಸಂಘ