ರೇಷ್ಮೆ ಧಾರಣೆ ಕುಸಿತದಿಂದ ರೈತರು ಕಂಗಾಲುಸೂಕ್ತ ಕಾನೂನು ಜಾರಿಗೆ ಬೆಳೆಗಾರರ ಆಗ್ರಹ

7 KKP 1
Published on

ಕನಕಪುರ

ರೇಷ್ಮೆಗೂಡು ಧಾರಣೆ ಕುಸಿತದಿಂದ ರೈತ ಕಂಗಾಲಾಗಿದ್ದು, ಸರ್ಕಾರ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಕಾನೂನು ಜಾರಿಗೆ ತರಬೇಕು ಎಂದು ತಾಲೂಕು ರೇಷ್ಮೆ ಬೆಳೆಗಾರರ ಸಂದ ಅಧ್ಯಕ್ಷ ಕಬ್ಬಾಳೇಗೌಡ ಒತ್ತಾಯಿಸಿದರು.

ನಗರದ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿ, ರೇಷ್ಮೆ ಬೆಳೆಗಾರರು ಅತಂತ್ರವಾಗಿರುವುದರಿಂದ ಸ್ಥಿರ ಬೆಲೆ ಬರುವಂತೆ ಸರ್ಕಾರ ನೆರವಾಗಬೇಕು. 1 ಕೆ.ಜಿ. ರೇಷ್ಮೆಗೂಡಿಗೆ 650 ರೂ.ವರೆಗೂ ಉತ್ಪಾದನಾ ವೆಚ್ಚವಾಗುತ್ತಿದೆ. ಬೆಲೆ ಕುಸಿತದಿಂದಾಗಿ ಇದರ ಅರ್ಧದಷ್ಟು ಬೆಲೆಯೂ ಬೆಳೆಗಾರನಿಗೆ ಸಿಗುತ್ತಿಲ್ಲ. ಇದರಿಂದ ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಎಂದರು.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೇಷ್ಮೆಗೂಡಿನ ಬೆಲೆ ಕುಸಿದಾಗ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ನೀಡಲು ಡಾ. ಬಸವರಾಜು ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಪ್ರತಿ ಕೆ.ಜಿ. ಬೈವೋಲ್ಟಿನ್​ ಗೂಡಿಗೆ 100 ರೂ. ಹಾಗೂ ಸಿಬಿ ಗೂಡಿಗೆ 50 ರೂ. ಬೆಂಬಲ ಬೆಲೆ ನೀಡಿದರೆ ಬೆಳೆಗಾರರ ಪರಿಸ್ಥಿತಿ ಸುಧಾರಿಸಲಿದೆ ಎಂದು ತನ್ನ ವರದಿಯಲ್ಲಿ ಶಿಾರಸು ಮಾಡಿತ್ತು. ಅದರಂತೆ ವರದಿ ಜಾರಿ ಮಾಡಿ ಸರ್ಕಾರ ಬೆಳೆಗಾರರ ನೆರವಿಗೆ ನಿಂತಿತ್ತು.

ನಂತರ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಆವರ್ತ ನಿಧಿ ನೀಡುವ ಮೂಲಕ ಅವರಿಗೂ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ರೈತ ಹಾಗೂ ರೇಷ್ಮೆ ನೂಲುದಾರರ ಸಂಕಷ್ಟಕ್ಕೆ ಪರಿಹಾರ ದೊರಕಿತ್ತು. ಸರ್ಕಾರ ರಾಜ್ಯ ರೇಷ್ಮೆ ನೂಲು ಮಾರಾಟ ಮಂಡಳಿಗೆ 100 ಕೋಟಿ ರೂ. ಆವರ್ತನಿಧಿ ಬಿಡುಗಡೆ ಮಾಡಿದರೆ, ಸರ್ಕಾರ ನೀಡುವ ಬೆಂಬಲ ಬೆಲೆಗಳಿಂದ ರೈತ ಹಾಗೂ ನೂಲು ಬಿಚ್ಚುವವರಿಗೆ ಅನುಕೂಲವಾಗಲಿದೆ ಎಂದರು.

ರೇಷ್ಮೆಗೂಡಿಗೆ ವೈಜ್ಞಾನಿಕ ದರ ನೀಡುವಂತೆ ಒತ್ತಾಯಿಸುವ ಮನವಿ ಪತ್ರವನ್ನು ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಮಾರುಕಟ್ಟೆಯ ಉಪ ನಿರ್ದೇಶಕ ಎಂ.ಎನ್​.ನಾಗರಾಜು ಅವರಿಗೆ ನೀಡಿದರು. ಸಹಾಯಕ ಅಧಿಕಾರಿ ಆನಂದ್​, ರೇಷ್ಮೆ ಬೆಳೆಗಾರರಾದ ಸುರೇಂದ್ರ, ಶಿವರಾಜು, ರಮೇಶ್​, ಶಿವಕುಮಾರ್​ ರೈತರು ಇದ್ದರು.

ರೇಷ್ಮೆ ಇಲಾಖೆ ಮುಚ್ಚಲು ಹುನ್ನಾರ

ರೈತರ ಸಂಕಷ್ಟಕ್ಕೆ ಸ್ಪಂದಿಸಲು ರೇಷ್ಮೆ ಇಲಾಖೆ ಅಗತ್ಯವಾಗಿದೆ. ಈ ಇಲಾಖೆಯನ್ನು ಮುಚ್ಚುವ ಹುನ್ನಾರ ನಡೆಯುತ್ತಿದೆ. ಇದನ್ನು ರೈತ ಸಂ ವಿರೋಧಿಸುತ್ತದೆ. ಸರ್ಕಾರ ಇಲಾಖೆ ಮುಚ್ಚಲು ಮುಂದಾದಲ್ಲಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಕಬ್ಬಾಳೆಗೌಡ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net