

ಕನಕಪುರ
ಗಂಡನ ವರ್ತನೆಯಿಂದ ಬೇಸತ್ತಿದ್ದ ಆಕೆ ಮಕ್ಕಳೊಂದಿಗೆ ತವರು ಮನೆ ಸೇರಿದ್ದಳು. ಮತ್ತೆ ಬಂದು ಕರೆದಾಗ ಎಲ್ಲವೂ ಸರಿ ಹೋಯಿತು ಎಂದು ಗಂಡನೊಂದಿಗೆ ಬೈಕ್ ಹತ್ತಿದ ಆ ನತದೃಷ್ಟೆ ಪ್ರಾಣವನ್ನೇ ಕಳೆದುಕೊಂಡಳು. ಅದೂ ನಡು ರಸ್ತೆಯಲ್ಲಿ.
ಪತ್ನಿಯ ಶೀಲದ ಬಗ್ಗೆಯೇ ಶಂಕಿಸಿದ್ದ ಪತಿ ತನ್ನ ಮಕ್ಕಳೆದುರೇ ಮಡನಿಯನ್ನು ದೊಣ್ಣೆಯಿಂದ ಮನಸ್ಸೋ ಇಚ್ಚೆ ಥಳಿಸಿ ಕೊಂದಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಹೊಸಕೋಟೆ ಗ್ರಾಮದ ಅಂಬಿಕಾ(30) ಕೊಲೆಯಾದ ನತದೃಷ್ಟೆ. ನಗರದ ಹೊಳೆಬೀದಿ ನೀಲಕಂಠೇಶ್ವರ ಬಡಾವಣೆ ವಾಸಿ, ಮುತ್ತ(38) ತನ್ನ ಪತ್ನಿಯನ್ನು ಇಬ್ಬರು ಮಕ್ಕಳ ಎದುರಿನಲ್ಲಿಯೇ ನೋಡು ನೋಡುತ್ತಿದ್ದಂತೆ ದೊಣ್ಣೆಯಿಂದ ಹೊಡೆದಿದ್ದು, ಅಂಬಿಕ ತಲೆಗೆ ತೀವ್ರ ಪೆಟ್ಟಾಗಿ ಅಸುನೀಗಿದ್ದಾಳೆ.
ಗಂಡ ತನ್ನ ಶೀಲದ ಬಗ್ಗೆಯೇ ಶಂಕಿಸುವುದರಿಂದ ಬೇಸತ್ತಿದ್ದ ಅಂಬಿಕಾ ತವರುಮನೆ ಹೊಸಕೋಟೆಗೆ ತೆರಳಿದ್ದಳು. ಪತ್ನಿಯನ್ನು ನೋಡುವ ನೆಪದಲ್ಲಿ ಅಲ್ಲಿಗೆ ತೆರಳಿದ್ದ ಆರೋಪಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಊರಿಗೆ ಹೋಗೋಣವೆಂದು ಬೈಕ್‌ನಲ್ಲಿ ಕರೆತಂದಿದ್ದಾನೆ. ಹೊಸಕೋಟೆಯ ಸುಚಾದ್ರಿ ಹೋಟೆಲ್ ಬಳಿ ರಸ್ತೆಯಲ್ಲಿ ನಿಲ್ಲಿಸಿ ಮಾತನಾಡುತ್ತಿದ್ದಂತೆ ದೊಣ್ಣೆುಂದ ಮನಬಂದಂತೆ ಹೊಡೆದು ಪತ್ನಿಯನ್ನು ಹತ್ಯೆಗೈದಿದ್ದಾನೆ.
ದಾರಿಹೋಕರು ಕೊಲೆಯಾಗಿ ಬಿದ್ದಿರುವ ಸುದ್ದಿಯನ್ನು ಪೋಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೋಲೀಸರು ಸ್ಥಳದಲ್ಲಿಯೇ ಕೂತಿದ್ದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮಾಂತರ ಎಸ್.ಐ ಮನೋಹರ್ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.