

ಕನಕಪುರ: ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಶಿವಶರಣೆ ತಾಯಿಮುದ್ದಮ್ಮ ದೇವಾಲಯದ ಮೂರು ವರ್ಷದ ಬಸವ ಹೃದಯಘಾತದಿಂದ ಮೃತಪಟ್ಟಿದೆ
ತಾಲೂಕಿನ ಪ್ರಸಿದ್ದ ಗ್ರಾಮದೇವತೆ ತಾಯಿಮುದ್ದಮ್ಮ ದೇವಾಲಯದಲ್ಲಿ ಪೂರ್ವ ಕಾಲದಿಂದಲೂ ಬಸವನನ್ನು ನೇಮಿಸುವುದು ಸಾಂಪ್ರದಾಯಿಕವಾಗಿ ನಡೆದುಕೊಂಡು ಬರುತ್ತಿದೆ. ಶುಕ್ರವಾರ ಬೆಳಗಿನ ಜಾವ ಶೀತಕ್ಕೆ ಒಳಗಾಗಿ ಹೃದಯಘಾತವಾಗಿರಬಹುದೆಂದು ಭಕ್ತರು ತಿಳಿಸಿದ್ದಾರೆ. ಎಂದಿನಂತೆ ದೇವಾಲಯದ ಪಕ್ಕದ ಕೊಳದಲ್ಲಿ ಸ್ನಾನ ಮಾಡಿಸಿ ದೇವಸ್ಥಾನದ ಬಳಿ ಕರೆತಂದು ಪೂಜೆ ನಡೆಸಿ ಅಲಂಕಾರ ಮಾಡುವ ವೇಳೆ ಬಸವ ಕುಸಿದು ಬಿದ್ದು ವಿಧಿವಶವಾಗಿದೆ. ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಬಸವನನ್ನು ಇರಿಸಲಾಗಿತ್ತು ಸುತ್ತಮುತ್ತ ಸಾವಿರಾರು ಭಕ್ತರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.
ಭವ್ಯ ಮೆರವಣಿಗೆ : ಶ್ರೀ ಕ್ಷೇತ್ರ ಮರಳೆಗವಿ ಮಠದ ಶ್ರೀ ಶಿವರುದ್ರಸ್ವಾಮಿಜಿ, ಅಜ್ಜಬಸವನಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿಗಳು ಆಗಮಿಸಿ ಬಸವನಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಶ್ರೀ ಚಂದ್ರ ಶೇಖರ ಶಿವಾಚಾರ್ಯಸ್ವಾಮೀಜಿ, ಭಾರತದಲ್ಲಿ ಗೋವಿಗೆ ತಾಯಿಯಷ್ಟೇ ಪೂಜ್ಯ ಭಾವನೆಯಿಂದ ಗೌರವಿಸಲಾಗುವುದು. ದೇವಾಲಯಕ್ಕೆ ಬಿಡುವ ಬಸವನನ್ನು ಭಕ್ತರು ಅತಿ ಶ್ರದ್ದಾ ಭಕ್ತಿಯಿಂದ ಪೂಜಿಸಿ, ಗೌರವಿಸುತ್ತಾರೆ. ತಾಯಿ ಮುದ್ದಮ್ಮ ದೇವಾಲಯದ ಬಸವ ವಿಧಿವಶವಾಗಿರುವುದು ಭಕ್ತರಿಗೆ ನೋವುಂಟಾಗಿದೆ. ಇದರ ಎಲ್ಲ ಸಾಂಪ್ರದಾಯಿಕ ಕಾರ್ಯಕ್ರಮಗಳು ಮುಗಿದ ನಂತರ ಮತ್ತೆ ಹೊಸ ಬಸವನನ್ನು ನೇಮಿಸಿಕೊಳ್ಳಲಾಗುವುದು ಎಂದರು.
ಭವ್ಯ ಮೆರವಣಿಗೆಯ ನಂತರ. ವೀರಶೈವ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಗ್ರಾಮ ಮುಖಂಡರಾದ ಬಸವರಾಜ, ಚನ್ನಗೌಡರ ಕುಟುಂಬಸ್ಥರು, ಪ್ರಧಾನ ಅರ್ಚಕರಾದ ಶಿವರಾಜ್, ನಾಗೇಶ್, ಶಿವಬಸವ ಸದಾಶಿವಯ್ಯ, ಸಂತೋಷ್, ನೂರಾರು ಭಕ್ತರು ಭಾಗಿಯಾಗಿದ್ದರು.