

ಕನಕಗಿರಿ: ಭಾವೈಕ್ಯತೆಯ ಸಂಕೇತವಾದ ಪಟ್ಟಣದ 12ನೇ ವಾರ್ಡ್‌ನ ಯಮನೂರಸ್ವಾಮಿ (ಚಾಂಗದೇವ) ಉರುಸು ಬುಧವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಉರುಸು ನಿಮಿತ್ತ ಮಂಗಳವಾರ ರಾತ್ರಿಯಿಡಿ ಕಲಾವಿದೆ ಹೊಸಹಳ್ಳಿಯ ಹುಲಿಗೆಮ್ಮ ಕಲಾ ಬಳಗದಿಂದ ನಡೆದ ಗೀಗೀ ಪದ ಹಾಗೂ ಸವಾಲಿನ ಪದಗಳು ನೆರದಿದ್ದವರ ಮನರಂಜಿಸಿದವು. ಬುಧವಾರ ಬೆಳಗಿನ ಜಾವ ಗಂಧಾಭಿಷೇಕ(ಸಂದಲ್) ನಿಮಿತ್ತ ವಿಜೃಂಭಣೆಯ ಮೆರವಣಿಗೆ ನಡೆಯಿತು.
ಯಮನೂರಸ್ವಾಮಿ ದರ್ಗಾದಿಂದ ಆರಂಭಗೊಂಡ ಮೆರವಣಿಗೆಯು ತೆಗ್ಗಿನಮನಿ, ದ್ಯಾಮವ್ವನಗುಡಿ, ರಾಜಬೀದಿಯ ಮೂಲಕ ದರ್ಗಾದವರೆಗೆ ನಡೆಯಿತು. ಉರುಸು ಪ್ರಯುಕ್ತ ಬುಧವಾರ ಭಕ್ತರು ತಂಡೋಪತಂಡವಾಗಿ ಸಕ್ಕರೆ, ಮಾದಲಿಯ ನೈವೇದ್ಯ ಅರ್ಪಿಸಿದರು. ದೀರ್ಘದಂಡ ನಮಸ್ಕಾರ, ಬೆಳ್ಳಿ ಕುದುರೆ, ಉಪ್ಪು ಸಮರ್ಪಣೆ ಮಾಡಿ ಭಕ್ತಿ ಸಮರ್ಪಿಸಿದರು. ದಾಸೋಹ ಸಮಿತಿಯವರಿಂದ ದರ್ಗಾವನ್ನು ನಾನಾ ಬಗೆಯ ಹೂವುಗಳಿಂದ ಅಲಂಕೃತಗೊಳಿಸಲಾಗಿತ್ತು. ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಯ ಬಣ್ಣ ಬಣ್ಣದ ಚಿತ್ತಾರ ಆಕರ್ಷಿತವಾಗಿತ್ತು. ಭಕ್ತರಿಗೆ ಅನ್ನಪ್ರಸಾದ ನಡೆಯಿತು. ಕೆಪಿಎಸ್ ಪ್ರಾಚಾರ್ಯ ಅಮರೇಶ ದೇವರಾಳ, ಅರ್ಚಕರಾದ ಶರಣಪ್ಪ, ಪ್ರಮುಖರಾದ ಆನಂದ ಮಡಿವಾಳ ಇತರರಿದ್ದರು.