

ಕನಕಗಿರಿ: ಮೇ 7ರಂದು ನಡೆಯುವ ಮತದಾನವನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಪಟ್ಟಣ ಸೇರಿ ಹುಲಿಹೈದರ ಗ್ರಾಮದಲ್ಲಿ ನಾಗಾಲ್ಯಾಂಡ್ ಆರ್ಮಿ ಫೋರ್ಸ್‌ನಿಂದ ಪಥ ಸಂಚಲನ ನಡೆಯಿತು.
ಆರ್ಮಿಯ ಡಿವೈಎಸ್‌ಪಿ ಜೇಮ್ಸ್ ಲುವಾಂಗ್ ಮಾತನಾಡಿ, ಒಟ್ಟು 85 ಜನ ಸಿಬ್ಬಂದಿ ಶಸ್ತ್ರ ಸಹಿತವಾಗಿ ತಾಲೂಕಿನಲ್ಲಿ ಶಾಂತಿಯುತವಾಗಿ ಮತದಾನ ಕೈಗೊಳ್ಳಲು ಬೇಕಾದ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದ್ದೇವೆ. ಜನತೆ ಯಾವುದೇ ಭಯವಿಲ್ಲದೆ ಮತದಾನ ಮಾಡಲು ಆತ್ಮಸ್ಥೈರ್ಯ ತುಂಬಲು ಕನಕಗಿರಿ ಹಾಗೂ ಹುಲಿಹೈದರ ಗ್ರಾಮದಲ್ಲಿ ಪಥಸಂಚಲನ ಮಾಡಲಾಗಿದೆ.
ಯಾವುದೇ ಅಹಿತಕರ ಘಟನೆಗಳು ನಡೆದರೂ ಮುಲಾಜೀಲ್ಲದೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 15 ಜನ ಪೊಲೀಸರು ಆರ್ಮಿಯ ಶಸ್ತ್ರ ಸಹಿತ ಸಿಬ್ಬಂದಿಗೆ ಸಾಥ್ ನೀಡಿದರು. ಪಿಐ ಎಂ.ಡಿ. ಫೈಜುಲ್ಲಾ, ಪಿಎಸ್‌ಐ ಲೋಕರಾಜ್, ಎಎಸ್‌ಐ ಸಯ್ಯದ್ ಜಾಫರುದ್ದೀನ್ ಇತರರಿದ್ದರು.