40 ವರ್ಷದ ಹಿಂದೆ ಕಾಣೆಯಾದಾತ ಕಂಡಾಗ..?

Vishwanath Gowda
40 ವರ್ಷದ ಹಿಂದೆ ನಾಪತ್ತೆಯಾಗಿದ್ದ ವಿಶ್ವನಾಥಗೌಡ.
Published on

ಕನಕಗಿರಿ: ನಲವತ್ತು 40 ವರ್ಷದ ಹಿಂದೆ ನಾಪತ್ತೆಯಾಗಿದ್ದ ತಾಲೂಕಿನ ಆದಾಪುರ ಗ್ರಾಮದ ವಿಶ್ವನಾಥಗೌಡ ಪೊಲೀಸ್ ಪಾಟೀಲ್ ಎಂಬುವರು ಸ್ನೇಹಿತನ ಸಹಾಯದಿಂದ ದಿಢೀರ್ ಪ್ರತ್ಯಕ್ಷವಾಗಿದ್ದು, ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಆಶ್ಚರ್ಯ ಜತೆಗೆ ಸಂತೋಷವನ್ನುಂಟು ಮಾಡಿದ್ದಾರೆ.

ಹಿನ್ನೆಲೆ: ರಾಯಚೂರಿನ ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ವಿಶ್ವನಾಥಗೌಡರ ಕೆಲಸ ಮೆಚ್ಚಿ 1984ರಲ್ಲಿ ಹೊಸದಾಗಿ ಆರಂಭವಾಗಿದ್ದ ಸಿಂಧನೂರು ಆರ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾಗಿ ನೇಮಕ ಮಾಡಲಾಗಿತ್ತು. ಉತ್ತಮ ಕೆಲಸದೊಂದಿಗೆ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ, ಗ್ರಾಹಕರೊಬ್ಬರ ಚಕ್‌ಬೌನ್ಸ್ ವಿಚಾರಕ್ಕೆ ಮನನೊಂದು ಮರ್ಯಾದೆಗಂಜಿ ಆಗಲೇ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದ ವಿಶ್ವನಾಥ, ಪತ್ನಿ, ಮಕ್ಕಳನ್ನು ತೊರೆದಿದ್ದರು. ಕುಟುಂಬಸ್ಥರು ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.

ಮಹಾರಾಷ್ಟ್ರ ಸೇರಿದ್ದ ವಿಶ್ವನಾಥಗೌಡ, ಅಲ್ಲಿಯೇ ಮದುವೆಯಾಗಿ ಜೀವನಕಟ್ಟಿಕೊಂಡಿದ್ದರೂ ಇಲ್ಲಿನ ಸಂಸಾರ, ಮಕ್ಕಳು ಹಾಗೂ ಊರಿನ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ ಎನ್ನಲಾಗಿದೆ. ಆದರೆ, ಇತನೊಂದಿಗೆ ಇದ್ದ ಬೆಳಗಾವಿ ಮೂಲದ ವ್ಯಕ್ತಿ ಸಹ ಇವರ ಮೂಲ ಪತ್ತೆ ಹಚ್ಚಿದರೂ ಸುಳಿವು ನೀಡಿರದ ವಿಶ್ವನಾಥಗೌಡ, ಇದೀಗ ಇಳಿ ವಯಸ್ಸಿನಲ್ಲಿ ಗುಟ್ಟು ರಟ್ಟು ಮಾಡಿದ್ದು, ಎರಡನೇ ಕುಟುಂಬದೊಂದಿಗೆ ಸ್ವಗ್ರಾಮ ಆದಾಪುರಕ್ಕೆ ಶುಕ್ರವಾರ ಸಂಜೆ ಬಂದಿದ್ದು, ಮೊದಲನೇ ಪತ್ನಿ, ಮಕ್ಕಳು, ಸಹೋದರರು ಹಾಗೂ ಬಂಧುಗಳನ್ನು ಭೇಟಿ ಮಾಡಿದ್ದು, ಮತ್ತೆ ಮಹಾರಾಷ್ಟ್ರಕ್ಕೆ ತೆರಳಲು ಮುಂದಾಗಿದ್ದಾರೆ.

ಗುತ್ತಿಗೆದಾರನಾಗಿ ಜೀವನ: ವಿಶ್ವನಾಥಗೌಡ ಸದ್ಯ ಮಹಾರಾಷ್ಟ್ರದ ಸಾತಾರ್ ಜಿಲ್ಲೆಯ ಕಡಲಿ ಇಲಾಸಪುರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. 1995 ರಲ್ಲಿ ಎರಡನೆ ಮದುವೆಯಾಗಿದ್ದು, ಪುತ್ರ, ಪುತ್ರಿ ಇದ್ದಾರೆ. ಇವರು ಆದಾಪುರಕ್ಕೆ ಬಂದ ಸುದ್ದಿ ತಿಳಿದು ಗ್ರಾಮಸ್ಥರು ನೋಡಲಿಕ್ಕೆ ಬರುತ್ತಿದ್ದಾರೆ. ವಿಶ್ವನಾಥಗೌಡ ಹೌದೋ ಅಲ್ಲವೋ ಎನ್ನುವವರಿಗೆ ಕುಟಂಬದ ವಿವರ ಹೇಳುತ್ತಿದ್ದಂತೆ ಜನರು ಬಾಯಿಯ ಮೇಲೆ ಬೆರಳಿಟ್ಟು ಕೊಳ್ಳುತ್ತಿದ್ದಾರೆ.

ಕೋಡಿಮಠ ಶ್ರೀ ಭವಿಷ್ಯ: 1984 ಡಿಸೆಂಬರ್‌ನಲ್ಲಿ ಕಾಣೆಯಾಗಿದ್ದ ವಿಶ್ವನಾಥಗೌಡರನ್ನು ಹುಡುಕಿ ಬೇಸತ್ತಿದ್ದ ಕುಟುಂಬ, ಕೋಡಿ ಮಠಕ್ಕೆ ತೆರಳಿದ್ದಾಗ ಸ್ವಾಮೀಜಿ ನೀವು ಅವರನ್ನು ಹುಡುಕಬೇಡಿ, ಒಂದಲ್ಲಾ ಒಂದು ದಿನ ಮನೆಗೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ. ಅವರು ಹೇಳಿದ ಭವಿಷ್ಯ ಇಂದು ನಿಜವಾಗಿದೆ ಎನ್ನುತ್ತಾರೆ ಕುಟುಂಬಸ್ಥರು.

ನನ್ನ ಹಿರಿಯ ಸಹೋದರ ವಿಶ್ವನಾಥಗೌಡ ಪೊಲೀಸ್ ಪಾಟೀಲ್ 40 ವರ್ಷದ ಹಿಂದೆ ನಾಪತ್ತೆಯಾಗಿದ್ದರು. ಈಗ ಪ್ರತ್ಯೇಕ್ಷವಾಗಿದ್ದರಿಂದ ಎಲ್ಲರಿಗೂ ಸಂತೋಷವಾಗಿದೆ. ಈಗ ಅವರಿಗೆ ವಯಸ್ಸಾಗಿದ್ದು, ಎರಡನೆ ಪತ್ನಿ ಜೊತೆ ಹೋಗಲು ನಿರ್ಧರಿಸಿದ್ದಾರೆ.

ಬಸನಗೌಡ ಪೊಲೀಸ್ ಪಾಟೀಲ್

ವಿಶ್ವನಾಥಗೌಡರ ಸಹೋದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net