ಕನಕಗಿರಿಯಿಂದ ಹಳ್ಳಿಗಳಿಗೆ ಹೆಚ್ಚುವರಿ ಬಸ್ ಬಿಡಿ: ರೈತ ಸಂಘ, ಗ್ರಾಮೀಣ ವಿದ್ಯಾರ್ಥಿಗಳ ಆಗ್ರಹ

280722 Nagalapura Farmers Students Appeal
ಕನಕಗಿರಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕಗೆ ರೈತ ಸಂಘ ಹಾಗೂ ಹಸಿರು ಸೇನೆ ನಾಗಲಾಪುರ ಗ್ರಾಮ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
Published on

ಕನಕಗಿರಿ: ಹೆಚ್ಚುವರಿ ಬಸ್ ಬಿಡಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನಾಗಲಾಪುರ ಗ್ರಾಮ ಘಟಕದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಪಟ್ಟಣದ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕಗೆ ಮನವಿ ಸಲ್ಲಿಸಿದರು.

ಮುಸಲಾಪುರ, ಓಬಳಬಂಡಿ, ಜಾಲಿಹುಡಾ, ಚಿಕ್ಕಮಾದಿನಾಳ, ಹಿರೇಮಾದಿನಾಳ ಮತ್ತು ನಾಗಲಾಪುರದಿಂದ ನಿತ್ಯ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ, 8 ಗ್ರಾಮಗಳ 160 ವಿದ್ಯಾರ್ಥಿಗಳಿಗೆ ಕೇವಲ ಒಂದು ಬಸ್ ಬಿಡಲಾಗುತ್ತಿದೆ. ಇದರಲ್ಲಿ ಪ್ರಯಾಣಿಕರೂ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ವಿದ್ಯಾರ್ಥಿನಿಯರ ಪರಿಸ್ಥಿತಿ ಹೇಳ ತೀರದಾಗಿದೆ. ನಾಗಲಾಪುರಕ್ಕೆ ಬರುವಷ್ಟರಲ್ಲಿಯೇ ಬಸ್ ತುಂಬಿರುತ್ತದೆ. ಹೀಗಾಗಿ ಕೆಲವರು ತರಗತಿಗಳಿಂದ ವಂಚಿತರಾಗುವಂತಾಗಿದೆ. ಬಸ್‌ನಲ್ಲಿ ವಿದ್ಯಾರ್ಥಿಗಳು ಜೋತು ಬಿದ್ದು ಸಂಚಾರ ಮಾಡುವಾಗ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಆದ್ದರಿಂದ ಹೆಚ್ಚುವರಿ ಬಸ್ ಸಂಚಾರ ಆರಂಭಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ರೈತ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಗದ್ದಿ, ಕಾರ್ಯಾಧ್ಯಕ್ಷ ಹನುಮೇಶ್ ಪೂಜಾರಿ, ಚಿಕ್ಕ ಮಾದಿನಾಳ ಗ್ರಾಮ ಘಟಕದ ಅಧ್ಯಕ್ಷ ಮರಿಯಪ್ಪ ತಿದಿ, ಪ್ರಮುಖರಾದ ಮಾರುತಿ, ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net