

ವಿಜಯವಾಣಿ ವಿಶೇಷ ಕನಕಗಿರಿ
ಇಲ್ಲಿನ ಹಲವು ಆಕರ್ಷಕ ಸ್ಮಾರಕಗಳಲ್ಲಿ ಒಂದಾದ ವೆಂಕಟಪತಿ ಬಾವಿಯಲ್ಲಿ ‘ದಾಸವರೇಣ್ಯ ವಿಜಯದಾಸರು’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಆದರೆ, ಇಲ್ಲಿನ ಅನೈರ್ಮಲ್ಯ ಕಂಡು ಬೇಸತ್ತ ನಟ ವಿಜಯಾನಂದ, ಸ್ಮಾರಕದ ಸ್ವಚ್ಛತೆಗೆ ಮುಂದಿನ ಒಂದು ವರ್ಷದವರೆಗೆ ಪ್ರತಿ ತಿಂಗಳು ಹಣ ನೀಡುವುದಾಗಿ ಹೇಳಿದ್ದಾರೆ.
ಹಂಪಿಯ ಸ್ಮಾರಕಗಳಲ್ಲಿರುವಂತೆ ನಾದ ಹೊಮ್ಮಿಸುವ ಕಂಬಗಳು ಇಲ್ಲೂ ಇದ್ದು, ಒಂದು ಕ್ಷಣ ಸೋಜಿಗಗೊಳಿಸುತ್ತವೆ. ಸಂಪೂರ್ಣ ಕಲ್ಲಿನಲ್ಲಿ ನಿರ್ಮಿಸಲಾದ ಬಾವಿಯಲ್ಲಿ ಅನೇಕ ಕಂಬಗಳಿದ್ದು, ಚಿತ್ತಾರಗಳಿಂದ ಕೂಡಿದೆ. ಎರಡಂತಸ್ತಿನ ವಿಶೇಷ ವಿನ್ಯಾಸದಿಂದಾಗಿ ನೋಡುಗರ ಗಮನಸೆಳೆಯುತ್ತದೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸಿನಿಮಾ ಶೂಟಿಂಗ್ ಹೆಚ್ಚಿದೆ.
ಪ್ರಸ್ತುತ ಈ ಸ್ಮಾರಕದ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆಗೇನೂ ಕಡಿಮೆಯಿಲ್ಲ. ಆದರೆ, ಇಲ್ಲಿನ ಅವ್ಯವಸ್ಥೆ ಕಸಿವಿಸಿ ಉಂಟು ಮಾಡುತ್ತದೆ. ‘ದಾಸವರೇಣ್ಯ ವಿಜಯದಾಸರು’ ಸಿನಿಮಾ ಚಿತ್ರೀಕರಣಕ್ಕೆಂದು ಸ್ಮಾರಕಕ್ಕೆ ಬಂದಿರುವ ತಂಡವೂ ಬಾವಿಯಲ್ಲಿನ ಅನೈರ್ಮಲ್ಯ ಕಂಡು ಬೇಸರ ವ್ಯಕ್ತಪಡಿಸಿತು. ಪುರಂದರದಾಸರ ಪಾತ್ರ ನಿರ್ವಹಿಸುತ್ತಿರುವ ನಟ ಹಾಗೂ ಚೆನ್ನೈ ಖಾಸಗಿ ಕಂಪನಿ ಉದ್ಯೋಗಿ ವಿಜಯಾನಂದ, ಸ್ಮಾರಕವನ್ನು 15 ದಿನಕ್ಕೊಮ್ಮೆ ಸ್ವಚ್ಛಗೊಳಿಸಲು ಮುಂದಾದರೆ ಮಾಸಿಕ ಹಣ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಾರ್ಮಿಕರನ್ನು ಕರೆದು ಮಾತನಾಡಿದ್ದು, ಮೊದಲ ದಿನವೇ ಸ್ವಚ್ಛಗೊಳಿಸಿ ಹಣ ಪಾವತಿಸಿದ್ದಾರೆ.
ಬೇಸಿಗೆಯಲ್ಲಿ ಅನುಕೂಲ: ಸ್ಮಾರಕವು ನೆಲಮಟ್ಟದಲ್ಲಿರುವುದರಿಂದ ಬೇಸಿಗೆಯಲ್ಲಿ ತಂಪಾಗಿರುತ್ತದೆ. ಹಲವರು ವಿಶ್ರಾಂತಿ ಪಡೆಯಲಿಕ್ಕೆ ಬರುತ್ತಾರೆ. ಆದರೆ, ಸ್ವಚ್ಛತೆ ಸಮಸ್ಯೆ ಎದುರಾಗಿತ್ತು. ಇದೀಗ ನಟ ವಿಜಯಾನಂದ ಸ್ಪಂದಿಸಿದ್ದು, ಜನತೆಗೆ ಅನುಕೂಲವಾಗಲಿದೆ. ಕಾಲೇಜುಗಳ ಎನ್ನೆಸ್ಸೆಸ್, ಬಿ.ಇಡಿ ಕಾಲೇಜುಗಳ ಸಿಟಿಸಿ ಶಿಬಿರ, ಸಂಘ-ಸಂಸ್ಥೆಗಳು ಸ್ಮಾರಕದ ಶುಭ್ರವಾಗಿ ಇರಿಸಲು ಪ್ರಯತ್ನಿಸಿವೆ. ಅದಾಗ್ಯೂ ಕೆಲ ಕಿಡಿಕೇಡಿಗಳಿಂದ ಅನೈರ್ಮಲ್ಯ ತಾಂಡವವಾಡುತ್ತಿದೆ.
ವಿಜಯನಗರ ಕೊಂಡಿ: ಈ ಸ್ಮಾರಕವನ್ನು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಕನಕಗಿರಿಯನ್ನು ಆಳುತ್ತಿದ್ದ ಗುಜ್ಜಲ ವಂಶದ ನಾಯಕರು ನಿರ್ಮಿಸಿದ್ದಾರೆ. ಆದರೆ, ಪಟ್ಟಣದಲ್ಲಿನ ಯಾವುದೇ ಸ್ಮಾರಕಗಳು ಪ್ರಾಚ್ಯವಸ್ತು ಇಲಾಖೆ ಸೇರದ್ದರಿಂದ ರಕ್ಷಣೆ ಇಲ್ಲವಾಗಿದೆ. ನೈಜ ಕೆತ್ತನೆ ಕಲೆ ಹೊಂದಿದ ವೆಂಕಟಪತಿ ಬಾವಿಯ ರಕ್ಷಿಸಿ ಪ್ರವಾಸಿಗರನ್ನು ಸೆಳೆಯುವ ಕಾರ್ಯವಾಗಬೇಕಿದೆ.
ವಿಜಯನಗರ ಅರಸರ ಕಾಲದಲ್ಲಿ ವಿಶಿಷ್ಟವಾಗಿ ನಿರ್ಮಿಸಿರುವ ವೆಂಕಟಪತಿ ಬಾವಿಯನ್ನು ರಕ್ಷಣೆ ಮಾಡದಿರುವುದು ನಾಚಿಕಗೇಡಿನ ಸಂಗತಿ. ವಿಶಿಷ್ಟವಾಗಿರುವ ಸ್ಮಾರಕದ ಸ್ವಚ್ಛತೆಗಾಗಿ ಮಾಸಿಕ ಒಂದು ಸಾವಿರ ರೂ.ನೀಡುತ್ತೇನೆ. ಪ್ರತಿ 15 ದಿನಕ್ಕೊಮ್ಮೆ ಸ್ವಚ್ಛ ಮಾಡುವಂತೆ ಕಾರ್ಮಿಕರಿಗೆ ತಿಳಿಸಿದ್ದೇನೆ.| ವಿಜಯಾನಂದ, ನಟವೆಂಕಟಪತಿ ಬಾವಿ ಐತಿಹಾಸಿಕ ಸ್ಮಾರಕ. ನಟರೊಬ್ಬರು, ಸ್ವಚ್ಛತೆಗೆ ಮನಸ್ಸು ಮಾಡಿರುವುದು ಶ್ಲಾಘನೀಯ. ಸ್ಮಾರಕದ ಮಹತ್ವ ತಿಳಿಯುವ ಮೂಲಕ ಸ್ಥಳೀಯರೂ ರಕ್ಷಣೆಗೆ ಮುಂದಾಗಬೇಕು.| ಕೀರ್ತಿ ಸೋನಿ, ಸ್ಥಳೀಯ ನಿವಾಸಿ, ಕನಕಗಿರಿ