

ಕನಕಗಿರಿ: ಎಸ್‌ಟಿಗೆ ಇತರ ಜಾತಿಗಳನ್ನು ಸೇರಿಸಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ತಾಲೂಕು ವಾಲ್ಮೀಕಿ ಸಮುದಾಯದಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಉಪಾಧ್ಯಕ್ಷ ನಿಂಗಪ್ಪ ನಾಯಕ ನವಲಿ ಮಾತನಾಡಿ, ಈವರೆಗೆ ಎಸ್‌ಟಿ ಸಮುದಾಯಕ್ಕೆ ಇದ್ದ ಶೇ.3 ಮೀಸಲಾತಿಯಿಂದ ಶೇ.7ಪಡೆಯಲು ಸತತ 30 ವರ್ಷ ಬೇಕಾಯಿತು. ಇದೀಗ ಎಸ್‌ಟಿಗೆ ಇತರ ಮುಂದುವದಿದ ಜಾತಿಗಳನ್ನು ಸೇರಿಸುವ ಮೂಲಕ ನಮಗೆ ಅನ್ಯಾಯ ಮಾಡಲು ಸರ್ಕಾರ ಮುಂದಾಗಿರುವುದು ಖೇಧಕರ.
ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ತರಲು ಹೊರಟಿದ್ದ ಬ್ರಿಟೀಷರ ವಿರುದ್ಧ ಆಗಿನ ಹಲಗಲಿ ಬೇಡರು ಧಂಗೆ ಎದ್ದಿದ್ದು ಇತಿಹಾಸ. ಇದೀಗ ನಾವುಗಳು ಹಲವು ವರ್ಷದ ಹೋರಾಟದ ಫಲವಾಗಿ ದೊರೆತ ಮೀಸಲಾತಿ ನಮಗಾಗಿಯೇ ಉಳಿಸಿಕೊಳ್ಳಲು ಮತ್ತೊಂದು ಬೇಡರ ಧಂಗೆಗೆ ಸರ್ಕಾರ ಕಾರಣವಾಗುತ್ತಿದೆ ಎಂದರು.
ಮಹಾಸಭಾದ ತಾಲೂಕು ಗೌರವಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಮಾತನಾಡಿ, ಕೋಲಿ, ಕಬ್ಬಲಿಗ, ಬೆಸ್ತ ಸೇರಿ ಅನ್ಯ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವುದಲ್ಲದೆ ಎಸ್‌ಟಿ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ. ಇದರಿಂದ ನಮ್ಮ ಸಮಾಜದವರಿಗೆ ಮೋಸವಾಗುತ್ತಿದೆ ಎಂದರು.
ಪಿರ್ಕಾರ್ಡ್ ಬ್ಯಾಂಕ್ ಸದಸ್ಯ ರಮೇಶ ನಾಯಕ ಮಾತನಾಡಿದರು. ರಾಜವಂಶಸ್ಥ ರಾಜಾ ಶರಶ್ಚಂದ್ರ ನಾಯಕ, ಮಹಾಸಭಾದ ತಾಲೂಕು ಅಧ್ಯಕ್ಷ ನಾಗರಾಜ ಇದ್ಲಾಪುರ, ಸಮಾಜ ಹಿರಿಯರಾದ ಸಂಗಪ್ಪ ರಾಮದುರ್ಗಾ, ಶರಣಪ್ಪ ಸೋಮಸಾಗರ, ಪಂಪಾಪತಿ ತರ್ಲಕಟ್ಟಿ, ಗ್ಯಾನಪ್ಪ ಗಾಣದಾಳ, ರಾಮು ಆಗೋಲಿ, ರಂಗಪ್ಪ ಕೊರಗಟಗಿ, ಕರಿಯಪ್ಪ ನಾಯಕ, ಕಂಠಿರಂಗಪ್ಪ ನಾಯಕ, ಶರಣೇಗೌಡ ಹುಲಸನಹಟ್ಟಿ, ಬೆಟ್ಟಪ್ಪ ಜೀರಾಳ, ರಂಗಪ್ಪ ತಳವಾರ, ಬಸವರಾಜ ಬಿ.ಕೆ, ನಾಗೇಂದ್ರ ನಾಯಕ ಇತರರಿದ್ದರು.