

ಕೊಪ್ಪಳ: ಸರ್ಕಾರದಿಂದ ಕನಕಗಿರಿ ಉತ್ಸವ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉತ್ಸವ ಆಚರಣೆ ಸಂಬಂಧ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐತಿಹಾಸಿಕ, ಪುರಾತನ ಸ್ಮಾರಕಗಳನ್ನು ರಕ್ಷಿಸುವ, ಅಭಿವೃದ್ಧಿ ಪಡಿಸುವ ಮತ್ತು ನಮ್ಮ ಸಂಸ್ಕೃತಿ, ಪರಂಪರೆಯನ್ನು ಯುವ ಪಿಳಿಗೆಗೆ ತಿಳಿಸುವುದೇ ನಮ್ಮ ಸರ್ಕಾರದ ಉದ್ದೇಶ. ಆನೆಗೊಂದಿ ಉತ್ಸವ ಮಾದರಿಯಲ್ಲಿ ಜಿಲ್ಲೆಯ ಕನಕಗಿರಿ ಉತ್ಸವವನ್ನೂ ಆಚರಿಸಲಾಗುವುದು. ಆಚರಣೆಗೆ ಬೇಕಾದ ಅನುದಾನ ಅಂದಾಜು ಪಟ್ಟಿಯನ್ನು ಮಾಡಿಕೊಳ್ಳಿ. ಯಾವಾಗ ಉತ್ಸವ ಆಚರಿಸಿದರೆ ಸೂಕ್ತ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಕನಕಗಿರಿ ಜಾತ್ರೆಯ ಮೊದಲು ಅಥವಾ ನಂತರ ಆಚರಿಸಿದರೆ ಸೂಕ್ತ ಎಂದರು. ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿ, ಮಾರ್ಚ್‌ನಲ್ಲಿ ಜಾತ್ರೆ ಇದೆ. ಈಗಾಗಲೇ ಆನೆಗೊಂದಿ ಉತ್ಸವ ಆಚರಿಸಿದ್ದೇವೆ. ಜಾತ್ರೆ ನಂತರ ಆಚರಿಸಿದರೆ ಸೂಕ್ತ. ತಯಾರಿಗೆ ಸಾಕಷ್ಟು ಸಮಯ ಸಿಗಲಿದೆ ಎಂದರು.
ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಮಾತನಾಡಿ, ಕನಕಗಿರಿ ಉತ್ಸವಕ್ಕೆ ಅಂದಾಜು 1 ರಿಂದ 1.5 ಕೋಟಿ ರೂ. ಅನುದಾನ ಬೇಕಾಗುವುದು. ಈ ಕುರಿತು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಮಾರ್ಚ್ ಕೊನೇ ವಾರ ಅಥವಾ ಏಪ್ರಿಲ್‌ನಲ್ಲಿ ಉತ್ಸವ ಆಚರಿಸಲು ನಿರ್ಧರಿಸಲಾಯಿತು. ಎಸ್ಪಿ ಜಿ.ಸಂಗೀತಾ, ಎಡಿಸಿ ಎಂ.ಪಿ.ಮಾರುತಿ, ಎಸಿ ಸಿ.ಡಿ.ಗೀತಾ, ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ.ಶೇಖ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಆಹಾರ ಇಲಾಖೆ ಉಪನಿರ್ದೇಶಕ ನಾರಾಯಣರೆಡ್ಡಿ ಕನಕರೆಡ್ಡಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ಕೆ.ರಂಗಣ್ಣನವರ ಸೇರಿ ಇತರ ಅಧಿಕಾರಿಗಳಿದ್ದರು.