ಕನಕಗಿರಿ: ಕೆಲಸದ ಸಮಯದಲ್ಲಿ ಸಿಬ್ಬಂದಿ ಕೊರಳಲ್ಲಿ ಕಡ್ಡಾಯವಾಗಿ ಐಡಿ ಕಾರ್ಡ್ ಇರಬೇಕು. ನೀವು ಕೂರುವ ಟೇಬಲ್‌ಗೆ ನಿಮ್ಮ ಹೆಸರಿನ ಜತೆಗೆ ಹುದ್ದೆಯ ಬೋರ್ಡ್ ಇರಬೇಕು. ನಿರುಪಯುಕ್ತ ವಸ್ತುಗಳನ್ನು ವಿಲೇವಾರಿ ಮಾಡಿ ಪಪಂಗೆ ಹಣ ಜಮೆ ಮಾಡಬೇಕು ಎಂದು ಸಿಬ್ಬಂದಿಗೆ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಖಡಕ್ ಸೂಚನೆ ನೀಡಿದರು.
ಇಲ್ಲಿನ ಪಪಂಗೆ ಬುಧವಾರ ಮುಖ್ಯಾಧಿಕಾರಿಯಾಗಿ ಬಂದ ಲಕ್ಷ್ಮಣ ಕಟ್ಟಿಮನಿ ಸಿಬ್ಬಂದಿ ಕೊರಳಲ್ಲಿ ಐಡಿ ಕಾರ್ಡ್ ಇಲ್ಲದಿರುವುದು ಕಂಡು ಗರಂ ಆಗಿ, ಇನ್ನುಮುಂದೆ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಐಟಿ ಕಾರ್ಡ್‌ಧರಿಸಬೇಕು ಎಂದರು.
ಪಂಚಾಯಿತಿ ಕಟ್ಟಡದ ಹಿಂದೆ ಬಿದ್ದಿದ್ದ ನಿರುಪಯುಕ್ತ ವಸ್ತುಗಳನ್ನು ಪರಿಶೀಲಿಸಿ ಇದು ಯಾಕೆ ಹಾಗೇ ಬಿಟ್ಟಿದ್ದೀರಿ? ವಿಲೇವಾರಿ ಮಾಡಿ ಬಂದ ಹಣವನ್ನು ಪಪಂ ಖಾತೆಗೆ ಜಮಾ ಮಾಡಬೇಕಲ್ಲವೇ ಎಂದ ಅವರು, ಸಿಬ್ಬಂದಿ ಕೂರುವ ಟೇಬಲ್‌ಗಳನ್ನು ವೀಕ್ಷಿಸಿ, ನೀವು ಕುಳಿತುಕೊಳ್ಳುವ ಸ್ಥಳದಲ್ಲಿ ಹುದ್ದೆಯ ಬೋರ್ಡ್ ಇಲ್ಲದಿದ್ದರೆ ಹೇಗೆ, ನಿಮ್ಮ ಹೆಸರು, ನೀವು ನಿರ್ವಹಿಸುವ ಕೆಲಸ ಸಾರ್ವಜನಿಕರಿಗೆ ತಿಳಿಯುವುದು ಕಷ್ಟ. ಕೂಡಲೇ ಹುದ್ದೆಯ ಬೋರ್ಡ್ ಹಾಕಿ ಎಂದು ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಆಡಳಿತ ಮಂಡಳಿ, ಜನ ಪ್ರತಿನಿಧಿಗಳ ಜತೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಲಹೆ-ಸಹಕಾರ ಪಡೆದು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.