

ಕನಕಗಿರಿ: ರಾಜಬೀದಿಯಲ್ಲಿ ಡಾಂಬರೀಕರಣ ಮಾಡುವಾಗ ದೊರೆತ ಹಳೆಯ ಪೈಪುಗಳನ್ನು ಪಟ್ಟಣ ಪಂಚಾಯಿತಿ ಸಿಬ್ಬಂದಿ ಅಕ್ರಮವಾಗಿ ಮಾರಿಕೊಂಡಿದ್ದು, ಸುಮಾರು ಮೂರ‌್ನಾಲ್ಕು ಲಕ್ಷ ರೂ. ಅವ್ಯವಹಾರವಾಗಿದೆ ಎಂದು ಪಪಂ ಸದಸ್ಯರು ಆರೋಪಿಸಿದರು.
ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ವಿಷಯ ಪ್ರಸ್ತಾಪಿಸಿದಾಗ ಪುರುಷ ಸದಸ್ಯರು ಅವ್ಯವಹಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಅವ್ಯವಹಾರ ನಡೆಸಿರುವ ನೀರು ಸರಬರಾಜು ಸಹಾಯಕ ವಿಜಯ್ ಗಡಾದ ಈ ಹಿಂದಿನ ಸಾಮಾನ್ಯ ಸಭೆಗೂ ಬಂದಿಲ್ಲ. ಇವತ್ತೂ ಬಂದಿಲ್ಲ. ಅಲ್ಲದೇ, ದುರುಪಯೋಗದ ದುಡ್ಡನ್ನು ಪಂಚಾಯಿತಿ ಖಾತೆಗೆ ಸಂದಾಯ ಮಾಡಿಲ್ಲ. ನೀರಿನ ಕರದ ದುಡ್ಡು ಜೇಬಿಗಿಳಿಸಿದ್ದಾನೆ.
ಈ ಹಿಂದಿನ ಮುಖ್ಯಾಧಿಕಾರಿಗಳಿಗೆ ಹಲವು ಬಾರಿ ಗಮನಕ್ಕೆ ತಂದಾಗ ಸಿಬ್ಬಂದಿಗೆ ನೋಟಿಸ್ ನೀಡಿರುವುದಾಗಿ ತಿಳಿಸಿದ್ದರು. ಆದರೆ, ಕ್ರಮಕ್ಕೆ ಮುಂದಾಗದಿರುವುದರಿಂದ ಅಂದಿನ ಮುಖ್ಯಾಧಿಕಾರಿಯೂ ಈ ಅಕ್ರಮದಲ್ಲಿ ಭಾಗವಹಿಸಿದಂತೆ ಕಾಣುತ್ತಿದೆ ಎಂದು ದೂರಿದರು.
ಆಗ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ಅನಾರೋಗ್ಯದ ಕಾರಣ ಸಿಬ್ಬಂದಿ ಧಾರವಾಡಕ್ಕೆ ತೆರಳಿದ್ದಾರೆ ಎಂದಾಗ, ಸದಸ್ಯರೆಲ್ಲ ವಿಜಯ್ ತನ್ನ ಹುದ್ದೆಯನ್ನು ನಿರ್ವಹಿಸಬೇಕು. ಆತನ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರು.
ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯನ್ನು ಸಭೆಯ ನಿರ್ಣಯದಂತೆ ಮುಂದೂಡಲಾಯಿತು. ಪಪಂ ವ್ಯಾಪ್ತಿಯಲ್ಲಿ ಆಸ್ತಿಗಳ ನ್ಯಾಯಾಲಯದಲ್ಲಿರುವುದು, ಇತರೆ ಸಮಸ್ಯೆಗಳ ಇತ್ಯರ್ಥಕ್ಕೆ ಕಾನೂನು ಸಲಹೆಗಾರರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಯಿತು.
ಪಪಂ ವಾಹನಗಳ ಸುರಕ್ಷತೆಗಾಗಿ ಸಿಸಿ ಕ್ಯಾಮರಾ, ಬೆಳಕಿನ ವ್ಯವಸ್ಥೆಗೆ ಸಮ್ಮತಿ ದೊರೆಯಿತು. ಹೊರಗುತ್ತಿಗೆ ನೌಕರರ ವೇತನ ಬಿಡುಗಡೆಗೊಳಿಸಬೇಕಲ್ಲದೇ, ಖಾಲಿಯಿರುವ ಗುತ್ತಿಗೆ ಹುದ್ದೆಗಳಿಗೆ ಈ ಹಿಂದಿನಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನೇ ನೇಮಿಸಿಕೊಳ್ಳಲು ಸದಸ್ಯರು ಒಪ್ಪಿದರು.
ತುರ್ತು ಸಂದರ್ಭದಲ್ಲಿ ಕೆಲಸಕ್ಕಾಗಿ ಸ್ಥಳೀಯವಾಗಿ ಜೆಸಿಬಿ ಆಪರೇಟರ್ ನೇಮಿಸಿಕೊಳ್ಳಬೇಕು. ಕೊಪ್ಪಳಕ್ಕೆ ಕೊಂಡೊಯ್ದಿರುವ ಸಕ್ಕಿಂಗ್ ಮಷಿನ್ ವಾಪಾಸ್ ತರಬೇಕು. ಬಾಡಿಗೆ ನೀರಿನ ಟ್ಯಾಂಕರ್, ಇಂಜಿನ್ ಸ್ಥಗಿತಗೊಳಿಸಬೇಕು. ತ್ರಿಚಕ್ರ ವಾಹನ ಒದಗಿಸಲು ಎಂಟು ಜನ ಅಂಗವಿಕಲರನ್ನು ಆಯ್ಕೆ ಮಾಡಲಾಯಿತು.
ಕಲಕೇರಿ ರಸ್ತೆಯಲ್ಲಿ ಆಶ್ರಯ ಯೋಜನೆಯಡಿ ಪ್ರಭಾವಿಗಳು ಪಡೆದಿರುವ ನಿವೇಶನಗಳನ್ನು ರದ್ದುಪಡಿಸಲು ಕ್ರಮ ವಹಿಸಬೇಕು ಸದಸ್ಯರು ಒತ್ತಾಯಿಸಿದರು. ಎಪಿಎಂಸಿ ಕಾರ್ಯದರ್ಶಿಗಳು ಪಪಂ ವಿರುದ್ಧ ಲೋಕಾಯುಕ್ತರಿಗೆ ಮಾಹಿತಿ ನೀಡಿರುವುದರಿಂದ ಅಲ್ಲಿನ ಮಳಿಗೆಗಳ ಮುಂದೆ ಮೆಟ್ಟಿಲು ಕಟ್ಟುವುದನ್ನು ತಡೆಯಬೇಕು ಎಂದು ಕೆಲ ಸದಸ್ಯರು ಆಗ್ರಹಿಸಿದರು.
ಪಟ್ಟಣದಲ್ಲಿ ಅನವಶ್ಯವಾಗಿರುವ ಹಂಪ್ಸ್ ತೆರವು ಮಾಡಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಎಇಗೆ ಸೂಚಿಸಲಾಯಿತು. ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡುವಂತೆ ಆರೋಗ್ಯ ಇಲಾಖೆಯವರಿಗೆ ತಿಳಿಸಲಾಯಿತು.
ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ರಾಕೇಶ, ಅಭಿಷೇಕ, ಹನುಮಂತ ಬಸರಿಗಿಡ, ಶರಣೇಗೌಡ, ನೂರಸಾಬ್ ಗಡ್ಡಿಗಾಲ, ನಂದಿನಿ, ತನುಶ್ರೀ ಇತರರಿದ್ದರು.
ತುಟಿ ಬಿಚ್ಚದ ಮಹಿಳಾ ಸದಸ್ಯರು
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಸೇರಿ ಭಾಗವಹಿಸಿದ್ದ 6, 11, 14, 16 ನೇ ವಾರ್ಡ್‌ಗಳ ಮಹಿಳಾ ಸದಸ್ಯರು ಸಭೆಯುದ್ದಕ್ಕೂ ತುಟಿ ಬಿಚ್ಚದೇ ಸುಮ್ಮನೆ ಕುಳಿತಿದ್ದರು. 16ನೇ ವಾರ್ಡ್‌ನ ಸದಸ್ಯೆ ಹುಸೇನಬೀ ಸಂತ್ರಾಸ್ ಕೊನೆ ಗಳಿಗೆಯಲ್ಲಿ ವಾರ್ಡ್‌ಗೆ ಮೂಲ ಸೌಲಭ್ಯ ಒದಗಿಸುವಂತೆ ಮನವಿ ಸಲ್ಲಿಸಿದರು.
ತಿಪ್ಪೆಯಂತಾದ ಅಡುಗೆ ಮನೆ
ಪಟ್ಟಣದ ದ್ಯಾಮವ್ವನಗುಡಿ ಶಾಲೆಯ ಅಡುಗೆ ಮನೆಯೂ ತಿಪ್ಪೆಯಂತಾಗಿದೆ. ನೀವು ಬಂದು ನೋಡಿಕೊಂಡು ಹೋಗುತ್ತೀರಿ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪಪಂ 9ನೇ ವಾರ್ಡ್ ಸದಸ್ಯ ರಾಜಾಸಾಬ ನಂದಾಪುರ ಸಭೆಯಲ್ಲಿದ್ದ ಇಸಿಒ ಆಂಜನೇಯರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಾಟಾಚಾರಕ್ಕೆ ಭೇಟಿ ನೀಡಿ ಕೈ ತೊಳೆದುಕೊಳ್ಳುತ್ತೀರಿ. ಮಕ್ಕಳು ಇರುವ ತರಗತಿಯಲ್ಲಿಯೇ ಅಡುಗೆ ಮಾಡಲಾಗುತ್ತದೆ. ಅನಾಹುತ ಸಂಭವಿಸಿದರೆ ಯಾರು ಹೊಣೆ ? ಎಂದಾಗ 4ನೇ ವಾರ್ಡ್ ಸದಸ್ಯ ಅನಿಲ್ ಬಿಜ್ಜಳ, ಪಟ್ಟಣದ ಶಾಲೆಗಳಿಗೆ ಬಿಇಒ ಭೇಟಿ ನೀಡಿ ಪರಿಶೀಲಿಸಬೇಕು. ಶಿಥಿಲ ಅವ್ಯವಸ್ಥೆ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಒತ್ತಾಯಿಸಿದರು.