

ಕನಕಗಿರಿ: ಪಟ್ಟಣದ ಅಂದ ಹೆಚ್ಚಿಸಲು ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ವಾಲ್ಮೀಕಿ ವೃತ್ತದಿಂದ ತಾವರಗೇರಾ ರಸ್ತೆಯ ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವು ನೆಪದಲ್ಲಿ ಪ್ರಭಾವಿಗಳಿಗೆ ಅನುಕೂಲ ಮಾಡಲು ಎಪಿಎಂಸಿ ಕಾಂಪೌಂಡ್ ತೆರವು ಮಾಡಿದ್ದು, ಕೆಲ ಅಧಿಕಾರಿಗಳು ಲಂಚ ಪಡೆದಿದ್ದಾರೆ ಎಂದು ಪಪಂ ಸದಸ್ಯ ಸಂಗಪ್ಪ ಸಜ್ಜನ್ ದೂರಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜ.18ರಂದು ಎಪಿಎಂಸಿಗೆ ಸಂಬಂಧಿಸಿದ ಜಾಗದಲ್ಲಿದ್ದ ಡಬ್ಬಾ ಅಂಗಡಿಗಳು ತೆರವು ಮಾಡಲಾಗಿದೆ ಮತ್ತು ಈ ಮೊದಲು ಶಿಥಿಲಗೊಂಡಿದ್ದ ಕಾಂಪೌಂಡ್ ಇದೀಗ ಮಾಯವಾಗಿದೆ.
ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವಿಗೆ ನಾವು ಠರಾವು ಪಾಸ್ ಮಾಡಿದ್ದೇವೆ. ಆದರೆ, ಎಪಿಎಂಸಿ ಕಾಂಪೌಂಡ್ ತೆರವುಗೊಳಿಸಿ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲಿದ್ದ ಫುಟ್‌ಪಾತ್ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿದ್ದು, ಪ್ರಭಾವಿಗಳಿಗೆ ಅನುಕೂಲವಾಗಿದೆ ಎನ್ನುವ ಗುಮಾನಿ ಇದೆ. ಈಗ ಬಡ ವ್ಯಾಪಾರಿಗಳು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಎಪಿಎಂಸಿ ಕಾಂಪೌಂಡ್ ನಿರ್ಮಿಸಿ ಕೊಡುವ ವ್ಯವಸ್ಥೆ ಮಾಡಬೇಕು ಎಂದರು.
ಇದಕ್ಕೆ ಸದಸ್ಯ ಅನಿಲ್‌ಕುಮಾರ ಬಿಜ್ಜಳ ಧ್ವನಿಗೂಡಿಸಿದರು. ಕೆಲ ಸದಸ್ಯರು ಎಪಿಎಂಸಿ ಕಾಂಪೌಂಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಫುಟ್‌ಪಾತ್ ತೆರವು ಕುರಿತು ಸಾಮಾನ್ಯ ಸಭೆಯಲ್ಲಿ ಲಂಚದ ಆರೋಪ ಮುನ್ನೆಲೆಗೆ ಬಂದಿದ್ದರಿಂದ ಹಲವು ಸದಸ್ಯರು, ಅಧಿಕಾರಿಗಳು ಮೌನವಾಗಿದ್ದರೆ, ಕೆಲ ಸದಸ್ಯರು ಈ ವಿಚಾರವನ್ನು ಬಿಟ್ಟು ಮುಂದಿನ ವಿಷಯವನ್ನು ತೆಗೆದುಕೊಂಡು ಚರ್ಚೆ ಮಾಡಿ ಎಂದು ಒತ್ತಾಯಿಸಿದರು
ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಮಾತನಾಡಿ, ಕನಕಗಿರಿ ಪಟ್ಟಣದ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ 2.37 ಕೋಟಿ ರೂ. ಅನುದಾನ ಮಂಜೂರಾಗಿದ್ದು, ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಲಾಗುವುದು. 15ನೇ ಹಣಕಾಸು ಯೋಜನೆಯಡಿ 2 ಕೋಟಿ ರೂ.ಗೂ ಹೆಚ್ಚು ಅನುದಾನ ಕುಡಿವ ನೀರಿಗಾಗಿ ಮಂಜೂರಾಗಿದೆ. ಇನ್ನು ಎಸ್‌ಎಫ್‌ಸಿಯಿಂದ 11 ಲಕ್ಷ, ಎಸ್‌ಸಿಪಿ 17 ಲಕ್ಷ ಹಾಗೂ ಟಿಎಸ್‌ಪಿಯಿಂದ 7 ಲಕ್ಷ ರೂ. ಅನುದಾನ ಬಂದಿದೆ ಎಂದರು.
ಕರವಸೂಲಿ ಪ್ರಮಾಣ ಹೆಚ್ಚಿಸಲು ಸೂಕ್ತ ಕ್ರಮವಹಿಸಿದರೆ ನಮ್ಮ ಪಂಚಾಯಿತಿಗೆ ಹೆಚ್ಚು ಅನುದಾನ ಪಡೆಯಲು ಅನುಕೂಲವಾಗಲಿದೆ. ಕರವಸೂಲಿಗೆ ತಕ್ಷಣಕ್ಕೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸದಸ್ಯ ಅಭಿಷೇಕ ಕಲುಬಾಗಿಲಮಠ ಒತ್ತಾಯಿಸಿದರು.
ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಶರಣೇಗೌಡ, ನೂರಸಾಬ ಗಡ್ಡಿಗಾಲ, ಸುರೇಶ ಗುಗ್ಗಳಶೆಟ್ರ, ರಾಜಸಾಬ ನಂದಾಪೂರ, ತನುಶ್ರೀ ಟಿ.ಜೆ., ಶಬಾನಾಬೇಗಂ, ಹುಸೇನಬೀ ಸಂತ್ರಾಸ್, ರಾಕೇಶ ಕಂಪ್ಲಿ, ಗಂಗಾಧರ ಚೌಡ್ಕಿ, ಶಾಂತಪ್ಪ ಬಸರಿಗಿಡದ ಇತರರಿದ್ದರು.
ಬಿ-ಖಾತಾ ಗೊಂದಲ
ಬಿ-ಖಾತಾ ಅಸ್ಪಷ್ಟವಿದ್ದು, ಈ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯಬೇಕು. ಈ ವಿಚಾರವಾಗಿ ಅನುಭವಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುವುದು ಮುಖ್ಯವಾಗಿದೆ. ಬಿ-ಖಾತಾಕ್ಕೆ ಸಂಬಂಧಿಸಿದಂತೆ ಡಬಲ್ ತೆರಿಗೆ ಕಟ್ಟುವವರು ಸಂಪೂರ್ಣ ಮಾಹಿತಿ ಪಡೆದು ಮುಂದುವರಿಯಬೇಕು. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಹುತೇಕ ಸದಸ್ಯರು ಬಿ-ಖಾತಾ ಗೊಂದಲ ತಿಳಿಗೊಳಿಸುವಂತೆ ಆಗ್ರಹಿಸಿದ ಬೆನ್ನಲ್ಲೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.