ಕನಕಗಿರಿ ಪಟ್ಟಣ ಪಂಚಾಯಿತಿ ಸದಸ್ಯರ ವನವಾಸಕ್ಕೆ ಮುಕ್ತಿ

Kanakagiri elected as President and Vice President
ಕನಕಗಿರಿ ಪಪಂ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಹುಸೇನಬೀ, ಕಂಠಿರಂಗ ನಾಯಕಗೆ ಸಚಿವ ಶಿವರಾಜ ತಂಗಡಗಿ ಅಭಿನಂದಿಸಿದರು. ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಅನಿಲ ಬಿಜ್ಜಳ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ, ಹುಸೇನಬೀ ಸಂತ್ರಾಸ್ ಇತರರಿದ್ದರು.
Published on

ಕನಕಗಿರಿ: ಕಳೆದ 35 ತಿಂಗಳಿಂದ ಕಾಯುತ್ತಿದ್ದ ಪಟ್ಟಣ ಪಂಚಾಯಿತಿಯ 17 ಸದಸ್ಯರ ವನವಾಸ ಕೊನೆಗೊಂಡಿದೆ. ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಮೂಲಕ ಅಧಿಕಾರದ ಕನಸನ್ನು ನನಸಾಗಿಸಿಕೊಂಡಿದ್ದಾರೆ.

ಪಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹುಸೇನಬೀ ಚಳ್ಳಮರದ ಅಧ್ಯಕ್ಷೆಯಾಗಿ ಹಾಗೂ ಕಂಠಿರಂಗ ನಾಯಕ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ತಹಸೀಲ್ದಾರ್ ವಿಶ್ವನಾಥ ಮುರುಡಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 17 ಸದಸ್ಯ ಬಲದ ಪಪಂಗೆ 12 ಜನ ಕಾಂಗ್ರೆಸ್ ಸದಸ್ಯರಿದ್ದರು. ಹಿಂವಅ (ಮಹಿಳೆ) ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ನಾಲ್ವರು ಸದಸ್ಯರು ಈ ಮೀಸಲಾತಿಗೆ ಅನ್ವಯವಾಗುವವರಿದ್ದರೆ, ಬಿಜೆಪಿಯಲ್ಲಿ ಯಾರೂ ಇರಲಿಲ್ಲ. ಇದರಿಂದ ಕಾಂಗ್ರೆಸ್‌ನಲ್ಲಿಯೇ ಪೈಪೋಟಿ ಏರ್ಪಟ್ಟಿತ್ತು.

ಒಂದನೇ ವಾರ್ಡಿನ ಸದಸ್ಯೆಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಕುಲಾಯಿಸಿದ್ದು, ಸಚಿವ ಶಿವರಾಜ ತಂಗಡಗಿ ಅವರು ಸದಸ್ಯರು, ಮುಖಂಡರ ಸಭೆ ನಡೆಸಿ ನಾಲ್ವರು ಸದಸ್ಯರ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ತಿಳಿಸಿದ್ದರು. ಸಿದ್ಧ್ದವಾದ ದಾಖಲೆಗಳನ್ನು ತಮ್ಮ ಆಪ್ತ ಸಹಾಯಕರ ಬಳಿ ಇರಿಸಿಕೊಂಡಿದ್ದು, ಮಂಗಳವಾರ ಒಂದನೇ ವಾರ್ಡಿನ ಸದಸ್ಯೆಗೆ ನಾಮಪತ್ರ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಹುಸೇನಬೀ ಚಳ್ಳಮರದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರಿಗೆ ಪಪಂ ಸದಸ್ಯ ರಾಜಾಸಾಬ ನಂದಾಪುರ ಹಾಗೂ ಶರಣೇಗೌಡ ಸೂಚಕರಾಗಿದ್ದರು. ಪಪಂಗೆ ಮೀಸಲಾಗಿದ್ದ ಏಕೈಕ ಸದಸ್ಯ ಕಂಠಿರಂಗ ನಾಮಪತ್ರ ಉಪಾಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದರು. ಸಂಗಪ್ಪ ಸಜ್ಜನ್, ಅನಿಲ್ ಬಿಜ್ಜಳ ಸೂಚಕರಾಗಿದ್ದು, ಅನಾಯಾಸವಾಗಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸದಸ್ಯರಾದ ಸುರೇಶ ಗುಗ್ಗಳಶೆಟ್ರ, ಅನಿಲ ಬಿಜ್ಜಳ, ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ, ಹುಸೇನಬೀ ಸಂತ್ರಾಸ್, ತನುಶ್ರೀ ಟಿ.ಜೆ. ರಾಮಚಂದ್ರ, ನಂದಿನಿ ರಾಮಾಂಜನೇಯರೆಡ್ಡಿ, ಅಭಿಷೇಕ ಕಲುಬಾಗಿಲಮಠ, ಸಂಗಪ್ಪ ಸಜ್ಜನ, ರಾಕೇಶ ಕಂಪ್ಲಿ ಇತರರಿದ್ದರು.

ಪಕ್ಷಭೇದ ಮರೆತು ಪ್ರಗತಿಗೆ ಶ್ರಮಿಸಲು ಸಲಹೆ

ಸಂಭ್ರಮಾಚರಣೆ ವೇಳೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನೂತನ ಅಧ್ಯಕ್ಷೆ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕ ಕೆಲಸ ಮಾಡಬೇಕು. ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ 15 ಕೋಟಿ ರೂ. ಬಿಡುಗಡೆಯಾಗಿದೆ. ಕನಕಗಿರಿ ಪಟ್ಟಣದಿಂದ ಮುಸಲಾಪೂರ-ಹಾಸಗಲ್ ಸಿಮಾದವರೆಗೆ ರಸ್ತೆ ಸುಧಾರಣೆ ಹಾಗೂ ವಿಸ್ತರಣೆ ಮಾಡಲಾಗುವುದು. ಪಪಂ ಬ್ಯಾಂಕ್ ಖಾತೆಯಲ್ಲಿನ ಮೊತ್ತವನ್ನು ನೋಡಿಕೊಂಡು ವಿವಿಧ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಅ.8ರಂದು ಭಾರತೀಯ ಸೇನಾ ತರಬೇತಿ ಕೇಂದ್ರ(ಸೈನಿಕ ಶಾಲೆ) ಹಾಗೂ ಉಪ ನೋಂದಣಿ ಕಚೇರಿ ಕಾರ್ಯಾರಂಭ ಮಾಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net