

ಕನಕಗಿರಿ: ಪಟ್ಟಣದ 6 ಹಾಗೂ 7ನೇ ವಾರ್ಡಿಗೆ ಹೊಂದಿಕೊಂಡು ಹರಿಯುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕಾಲ್ಸೇತುವೆ ದುರಸ್ತಿಗೊಳಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಸ್ಥಳೀಯ ಆಡಳಿತ ಮುಂದಾಗಬೇಕಿದೆ.
6 ಹಾಗೂ 7ನೇ ವಾರ್ಡಿನ ಮಧ್ಯದ ಹಳ್ಳಕ್ಕೆ ಎರಡು ಕಾಲ್ಸೇತುವೆಗಳಿದ್ದು, ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿವೆ. ಈ ಸೇತುವೆಗಳ ಎರಡೂ ಬದಿಯಲ್ಲಿ ರಕ್ಷಣೆಗಾಗಿ ಹಾಕಲಾದ ಕಬ್ಬಿಣದ ಸರಳುಗಳು ಕಿತ್ತು ಹೋಗಿದ್ದು, ಅಪಾಯ ಆಹ್ವಾನಿಸುತ್ತಿವೆ.
ದ್ವಿಚಕ್ರ ವಾಹನಗಳು ಸಹ ಇದೇ ರಸ್ತೆಯಲ್ಲಿ ಸಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸವಾರರಿಗೆ ತೊಂದರೆಯಾದರೆ ಯಾರು ಹೊಣೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದೇ ಮಾರ್ಗವಾಗಿ ಶ್ರೀ ರುದ್ರಸ್ವಾಮಿ ಪ್ರೌಢ ಶಾಲೆ, ಚೆನ್ನಶ್ರೀರುದ್ರ ಪಿಯು ಕಾಲೇಜು, ಕೆಪಿಎಸ್ ಪ್ರಾಥಮಿಕ, ಪ್ರೌಢ, ಕಾಲೇಜು ವಿಭಾಗದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದೇ ಸೇತುವೆ ಮೇಲೆ ಸಂಚರಿಸುತ್ತಿದ್ದು, ಶೀಘ್ರವೇ ಸೇತುವೆ ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಾಲೆ, ಕಾಲೇಜುಗಳ ಸಾವಿರಾರು ಮಕ್ಕಳು ಸಂಚರಿಸುವ ಕಾಲ್ಸೇತುವೆಗಳ ಕಬ್ಬಿಣದ ಸರಳು ಕಿತ್ತು ಹೋಗಿದ್ದು, ಅಪಾಯ ಸಂಭವಿಸುವ ಮುನ್ನ ದುರಸ್ತಿಪಡಿಸಲು ಪಟ್ಟಣ ಪಂಚಾಯಿತಿ ಮುಂದಾಗಬೇಕು.
ಸಣ್ಣ ಕನಕಪ್ಪ
ಬಿಜೆಪಿ ಮಂಡಲ ಅಧ್ಯಕ್ಷ