ತಂಗಡಗಿಯಿಂದ ದಲಿತ ಕುಟಂಬಕ್ಕೆ ದೌರ್ಜನ್ಯ

he overnight sit-in begins
ನವಲಿ ಗ್ರಾಮದ ಮಾಕಣ್ಣ ಕಂಬಳಿ ವೃತ್ತದಲ್ಲಿ ಸಚಿವ ಶಿವರಾಜ ತಂಗಡಗಿ ಹಾಗೂ ತಾಲೂಕಾಡಳಿತ ಅಧಿಕಾರಿಗಳ ದಲಿತ ವಿರೋಧಿ ನಡೆ ಖಂಡಿಸಿ ಶುಕ್ರವಾರ ಅಹೋರಾತ್ರಿ ಧರಣಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು ಬೆಂಬಲ ವ್ಯಕ್ತಪಡಿಸಿದರು. ಪ್ರಮುಖರಾದ ಲಿಂಗರಾಜ ಹೂಗಾರ, ಭೀಮನಗೌಡ, ಮಂಜುನಾಥ ಮಸ್ಕಿ ಇತರರಿದ್ದರು.
Published on

ಕನಕಗಿರಿ: ದಲಿತ ಕುಟುಂಬದ ವಿರುದ್ಧ ರಾಜಕೀಯ ದುರುದ್ದೇಶದಿಂದ ಸಚಿವ ಶಿವರಾಜ ತಂಗಡಗಿ ದೌರ್ಜನ್ಯ ಎಸಗುತ್ತಿರುವುದನ್ನು ಹಾಗೂ ತಾಲೂಕಾಡಳಿತ ಅಧಿಕಾರಿಗಳ ದಲಿತ ವಿರೋಧಿ ನಡೆ ಖಂಡಿಸಿ ತಾಲೂಕಿನ ನವಲಿ ಗ್ರಾಮದಲ್ಲಿ ನೊಂದ ದಲಿತ ಕುಟುಂಬ ಹಾಗೂ ಸಮಾನ ಮನಸ್ಕರಿಂದ 48 ಗಂಟೆಗಳ ಅಹೋರಾತ್ರಿ ಧರಣಿಗೆ ಶುಕ್ರವಾರ ಚಾಲನೆ ದೊರೆಯಿತು.

ಪ್ರಗತಿಪರ ಹೋರಾಟಗಾರ ಲಿಂಗರಾಜ ಹೂಗಾರ ಮಾತನಾಡಿ, ದಲಿತ ಕುಟಂಬಕ್ಕೆ ಮನೆ ನಿರ್ಮಿಸಲು ಅವಕಾಶ ನೀಡುತ್ತಿಲ್ಲ. ಅಧಿಕಾರಿಗಳು ಸಹ ಸಚಿವರ ಅಣತಿಯಂತೆ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ನೊಂದ ಕುಟುಂಬ ಹಾಗೂ ಸಮಾನ ಮನಸ್ಕರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಗ್ರಾಪಂ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮಾತನಾಡಿ, ಕ್ಷೇತ್ರದಲ್ಲಿ ದಲಿತರನ್ನು ಒಡೆದು ಆಳುವ ನೀತಿಗೆ ಸಚಿವ ಶಿವರಾಜ ತಂಗಡಗಿ ಮುಂದಾಗಿದ್ದಾರೆ. ದಲಿತ ಕುಟುಂಬವೊಂದು ವಾಸಿಸಲಿಕ್ಕೆ ಮನೆ ನಿರ್ಮಾಣಕ್ಕೆ ಮುಂದಾದರೆ ಸಚಿವರು, ಅವರ ಕೆಲ ಹಿಂಬಾಲಕರ ಮಾತು ಕೇಳಿ ಮನೆ ನಿರ್ಮಾಣಕ್ಕೆ ಪೊಲೀಸ್, ತಹಸೀಲ್ದಾರ್, ಪಿಡಿಒ ಮೂಲಕ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ವಿರುದ್ಧ ಪ್ರಚಾರ ಮಾಡಿದ್ದಾರೆ ಎನ್ನುವ ನೆಪದಲ್ಲಿ ಈ ರೀತಿಯಾಗಿ ಸಚಿವರು ಕಳೆದ 3 ತಿಂಗಳಿಂದ ದಲಿತ ಕುಟುಂಬಕ್ಕೆ ತೊಂದರೆ ನೀಡುತ್ತಿದ್ದಾರೆ. 48 ಗಂಟೆಯೊಳಗೆ ಅಧಿಕಾರಿಗಳು ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಪ್ರಾಕೃಪಸ ಸಂಘದ ಅಧ್ಯಕ್ಷ ಭೀಮನಗೌಡ, ಕಾರಟಗಿ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಕನಕಗಿರಿ ಪಪಂ ಸದಸ್ಯ ಹನುಮಂತ ಬಸರಿಗಿಡ, ಬಿಜೆಪಿ ಮಂಡಲ ಉಪಾಧ್ಯಕ್ಷ ನಿಂಗಪ್ಪ ನಾಯಕ, ನೊಂದ ಕುಟುಂಬದ ವೀರೇಶ ನಾಗವಂಶಿ ಇತರರಿದ್ದರು.

ಅಶಾಂತಿಗೆ ಕಾರಣವಾಗಬೇಡಿ: ಸ್ಥಳಕ್ಕೆ ಆಗಮಿಸಿದ ಪಿಡಿಒ ವೀರಣ್ಣ ನಕ್ರಳ್ಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಬಸವರಾಜ ದಢೇಸುಗೂರು, ಕಾನೂನು ಪಾಲನೆ ಮಾಡಬೇಕಾದ ಅಧಿಕಾರಿಗಳೇ ಒತ್ತಡಕ್ಕೆ ಮಣಿದರೆ ಹೇಗೆ?. ನೀವುಗಳು ಸಂವಿಧಾನವನ್ನು ಪಾಲನೆ ಮಾಡುವುದರ ಜತೆಗೆ ಯುವ ಜನತೆಗೆ ತಿಳಿಸಿಕೊಡಬೇಕು. ಅದನ್ನು ಬಿಟ್ಟು ನೀವುಗಳೇ ಜನರನ್ನು ದಾರಿ ತಪ್ಪಿಸಿದರೆ ಗ್ರಾಮದಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net