

ಕನಕಗಿರಿ: ತಾಲೂಕಿನ ಇಂಗಳದಾಳ ಕೆರೆ ತುಂಬಿಸಲು ಕ್ರಮ ವಹಿಸುವಂತೆ ಆಗ್ರಹಿಸಿ ಹುಲಸನಟ್ಟಿ, ಅಡವಿಬಾವಿ, ದೊಡ್ಡತಾಂಡಾ, ಚಿಕ್ಕ ತಾಂಡಾ, ಕನ್ನೇರಮಡು ಗ್ರಾಮಸ್ಥರು ಮಂಗಳವಾರ ಶಿರಸ್ತೇದಾರ್ ಶರಣಪ್ಪಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥ ಯಮನೂರಪ್ಪ ದಳಪತಿ ಮಾತನಾಡಿ, ಕೆರೆ ತುಂಬಿಸುವುದರಿಂದ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ಅಪೂರ್ಣ ಮಳೆಯಿಂದ ಕೆರೆ ಭರ್ತಿಯಾಗಿಲ್ಲ. ಇನ್ನು ಜಂತಗಲ್ ಬಳಿ ಹರಿಯುವ ತುಂಗಭದ್ರಾ ನದಿಯಿಂದ ಕನಕಗಿರಿಯ ಲಕ್ಷ್ಮೀದೇವಿ ಕೆರೆಗೆ, ಇಲ್ಲಿಂದ ಇಂಗಳದಾಳ ಕೆರೆಗೆ ನೀರು ತುಂಬಿಸುವ ಯೋಜನೆ ಜಾರಿಯಿದ್ದರೂ ಈವರೆಗೆ ಕೆರೆಗೆ ನೀರು ತುಂಬಿಸಿಲ್ಲ.
ವ್ಯರ್ಥವಾಗಿ ಹರಿದು ಹೋಗುತ್ತಿರುವ ತುಂಗಭದ್ರಾ ನದಿ ನೀರು ತುಂಬಿಸಿದರೆ ರೈತರ ಬಾಳು ಹಸನಾಗುವುದಲ್ಲದೇ, ಪಶು ಪಕ್ಷಿಗಳಿಗೂ ಅನುಕೂಲವಾಗುತ್ತದೆ. ಹೀಗಾಗಿ ಅಧಿಕಾರಿಗಳು ಒಂದು ವಾರದಲ್ಲಿ ಕೆರೆ ತುಂಬಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನಿರ್ಲಕ್ಷಿಸಿದರೆ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಪಂ ಮಾಜಿ ಅಧ್ಯಕ್ಷ ಪಾಂಡುರಂಗ ರಾಠೋಡ್, ಪ್ರಮುಖರಾದ ರಾಮಣ್ಣ, ಸೋಮನಗೌಡ ಹುಲಸನಟ್ಟಿ, ಹನುಮಂತಪ್ಪ ರಾಠೋಡ್, ಗಿಡ್ಡಪ್ಪ ಉಪ್ಪಾರ, ಹನುಮಂತಪ್ಪ ಇಂಗಳದಾಳ, ಮೂಖೇಶ ನಾಯಕ, ಚಂದ್ರೇಗೌಡ ಪರಾಪುರ ಇತರರಿದ್ದರು.