

ಕನಕಗಿರಿ: ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ನಾನಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಾಲೂಕು ಮಟ್ಟದ ಸಮಿತಿ ರಚಿಸಿ ರೈತರ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಗ್ರೇಡ್ 2 ತಹಸೀಲ್ದಾರ್ ವಿ.ಎಚ್. ಹೊರಪೇಟಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ತಾಲೂಕಿನ ರೈತರಿಗೆ ನೂರಾರು ಸಮಸ್ಯೆಗಳಿವೆ. ಇದುವರೆಗೂ ಅನೇಕರಿಗೆ ಬರ ಪರಿಹಾರ ದೊರೆತಿಲ್ಲ. ನಿಗದಿತ ದರದಲ್ಲಿ ರಸಗೊಬ್ಬರ ಸರಬರಾಜಾಗುತ್ತಿಲ್ಲ. ಗ್ರಾಪಂ ಮಟ್ಟದಲ್ಲಿ ರೈತರಿಗೆ ವೈಯಕ್ತಿಕ ಕಾಮಗಾರಿ ನೀಡುತ್ತಿಲ್ಲ. ವಿಷ ಜಂತುಗಳು ಕಚ್ಚಿ ಸಾವನ್ನಪ್ಪಿದ ಕೃಷಿಕರಿಗೆ ಮರಣ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಲಾಗುತ್ತಿದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.
ಭೂ ವ್ಯಾಜ್ಯಗಳು ಬೇಗ ಬಗೆಹರಿಯುತ್ತಿಲ್ಲ. ಬರದಿಂದ ಬಳಸವಳಿದ ರೈತರಿಗೆ ಸಾಲ ಮರು ಪಾವತಿಸುವಂತೆ ಬ್ಯಾಂಕ್‌ಗಳು ನೋಟಿಸ್ ಜಾರಿ ಮಾಡುತ್ತಿವೆ. ಹೀಗೆ ನಾನಾ ಇಲಾಖೆಯಿಂದ ರೈತರು ಅನೇಕ ತೊಂದರೆ ಎದುರಿಸುತ್ತಿದ್ದಾರೆ. ಹೀಗಾಗಿ ರೈತ ಮುಖಂಡರು, ನಾನಾ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಿ ಸಮಸ್ಯೆ ಪರಿಹರಿಸಬೇಕೆಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಭೀಮನಗೌಡ ಗುಡುದೂರು, ಕಾರ್ಯಾಧ್ಯಕ್ಷ ಹನುಮೇಶ ಪೂಜಾರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಬಡಿಗೇರ, ಸದಸ್ಯರಾದ ಸಣ್ಣ ಶೇಖರಪ್ಪ ಗದ್ದಿ, ನಿಂಗಪ್ಪ ಜಾಲಿಹುಡಾ, ಭರಮಪ್ಪ, ನರೇಗಲ್ಲಪ್ಪ ಇತರರಿದ್ದರು.