

ಕನಕಗಿರಿ: ಗ್ರಂಥಾಲಯವಿಲ್ಲದ ಗ್ರಾಮಗಳಲ್ಲಿ ಪುಸ್ತಕ ಗೂಡು ಕಾರ್ಯಕ್ರಮ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ವಿಸ್ತರಿಸಲಾಗುವುದು ಎಂದು ತಾಪಂ ಇಒ ಕೆ.ರಾಜಶೇಖರ್ ಹೇಳಿದರು.
ತಾಲೂಕಿನ ಬೆನಕನಾಳ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಅಗಸಿ ಕಟ್ಟೆಯಲ್ಲಿ ಗುರುವಾರ ಸುಳೇಕಲ್ ಗ್ರಾಪಂಯಿಂದ ಹಮ್ಮಿಕೊಂಡಿದ್ದ ಪುಸ್ತಕದ ಗೂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಕಲ್ಯಾಣ ಕರ್ನಾಟಕದಲ್ಲಿಯೇ ಮೊದಲು ಪುಸ್ತಕ ಗೂಡು ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂನಲ್ಲಿ ಆರಂಭಿಸಲಾಗಿದೆ. ಎರಡನೇ ಪುಸ್ತಕಗೂಡು ಸಹ ನಮ್ಮ ತಾಲೂಕಿನ ಸುಳೇಕಲ್ ಗ್ರಾಪಂ ಬೆನಕನಾಳ ಗ್ರಾಮದಲ್ಲಿ ಆರಂಭವಾಗುತ್ತಿರುವುದು ಹೆಮ್ಮೆಯ ವಿಚಾರ. ಓದುಗರಿಗೆ ತಾವಿದ್ದಲ್ಲಿಯೇ ಅವಕಾಶ ಕಲ್ಪಿಸಿಕೊಡುವ ಉದ್ದೇಶ ಹೊಂದಲಾಗಿದೆ. ಪುಸ್ತಕದೊಂದಿಗೆ ಸಮಯ ಕಳೆಯುವುದರಿಂದ ಜ್ಞಾನ ಗಳಿಸಲು ಸಹಕಾರಿಯಾಗಲಿದೆ ಎಂದರು.
ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮಿ ಮಾತನಾಡಿ, ಈ ಪುಸ್ತಕ ಗೂಡನ್ನು ಸರ್ಮಪಕವಾಗಿ ಬಳಸಿಕೊಂಡು ಅದರಿಂದ ಮಹತ್ವ ಜ್ಞಾನವನ್ನು ಸಂಪಾದಿಸಬೇಕು ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ತಾಲೂಕಿನ ಫೆಲೋ ಆದ ಡಾ.ತಿಪ್ಪೇಸ್ವಾಮಿ ಮಾತನಾಡಿದರು. ಗ್ರಾಪಂ ಪಿಡಿಒ ಹನುಮಂತಪ್ಪ, ಗ್ರಾ.ಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ ಇತರರಿದ್ದರು.