

ಕನಕಗಿರಿ: ಶ್ರೀ ಕನಕಾಚಲಪತಿ ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ಈ ವರ್ಷ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಕನಕಾಚಲ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾ.21ರಂದು ಮಹಾ ರಥೋತ್ಸವ ಜರುಗಲಿದ್ದು, ಸ್ವಚ್ಛತೆ ಹಾಗೂ ಸುಗಮ ರಥೋತ್ಸವದ ಉದ್ದೇಶದಿಂದ ಈ ಬಾರಿ ತೇರಿಗೆ ಬಾಳೆಹಣ್ಣು ಎಸೆಯುವುದನ್ನು ನಿಷೇಧಿಸಿ ಉತ್ತತ್ತಿ ಎಸೆಯಲು ಅವಕಾಶ ನೀಡಲಾಗಿದೆ.
ಕಳೆದ ವರ್ಷ ಡಾಂಬರೀಕರಣ ಮಾಡಲಾಗಿರುವ ರಾಜಬೀದಿಯಲ್ಲಿ ಅಂಗಡಿಗಳನ್ನು ಹಾಕಲು ಗುಂಡಿ ತೋಡುವುದಾಗಲಿ, ಮೊಳೆ ಹೊಡೆಯುವುದಾಗಲಿ ಮಾಡುವಂತಿಲ್ಲ. ರಥೋತ್ಸವ ವೇಳೆ ರಥದ ಮೇಲೆ 6 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಜಾತ್ರೆಯಲ್ಲಿ ಕರ್ಕಶವಾಗಿ ಪೀಪಿ ಊದಿ ಜನರಿಗೆ ಕಿರಿ ಕಿರಿ ಉಂಟು ಮಾಡುವ ಪೀಪಿ ಮಾರಾಟ ನಿಷೇಧಿಸಲಾಗಿದೆ. ಪೊಲೀಸರು ಅಂಥಹವರ ವಿರುದ್ಧ ಕಾನೂನು ಕ್ರಮವಹಿಸಲು ಸೂಚಿಸಿದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಪ್ರಮುಖರಾದ ವೆಂಕಟೇಶ ಸೌದ್ರಿ, ಕೀರ್ತಿ ಸೋನಿ, ಅನಿಲ್ ಬಿಜ್ಜಳ, ವಿಜಯಪ್ರಸಾದ, ವೆಂಕಾರೆಡ್ಡಿ ಓಣಿಮನಿ ಇತರರಿದ್ದರು.