

ಕನಕಗಿರಿ: ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ನೀಡುವ ಬೀದಿ ನಾಯಿ, ಕೋತಿಗಳನ್ನು ಹಿಡಿದು ಸ್ಥಳಾಂತರಿಸುವುದು ಗ್ರಾಪಂ ಜವಾಬ್ದಾರಿ. ವಿಪರ್ಯಾಸವೆಂದರೆ ತಾಲೂಕಿನ ಸೂಳೇಕಲ್ ಗ್ರಾಪಂಗೆ ನಿತ್ಯ ಕೋತಿಗಳು ದಾಂಗುಡಿ ಇಡುತ್ತಿದ್ದು, ಸಿಬ್ಬಂದಿ ಪರದಾಡುವಂತಾಗಿದೆ.
ಗ್ರಾಪಂ ಆವರಣದಲ್ಲಿ ಹತ್ತಾರು ಬಗೆಯ ಗಿಡಗಳಿವೆ. ನಿತ್ಯ ವಾನರ ಸೇನೆ ಪಂಚಾಯಿತಿ ಆವರಣಕ್ಕೆ ನುಗ್ಗಿ ಗಿಡಗಂಟೆಗಳನ್ನು ಹಾಳು ಮಾಡುತ್ತಿವೆ. ಇದರಿಂದ ಗ್ರಾಪಂ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ.
ಹಲವು ವರ್ಷಗಳ ಶ್ರಮ ವ್ಯರ್ಥ: ಲಕ್ಷಾಂತರ ರೂ. ವ್ಯಯ ಮಾಡಿ ಗ್ರಾಪಂ ಆವರಣದಲ್ಲಿ ನಿರ್ಮಿಸಲಾದ ಉದ್ಯಾನ ಮಂಗಗಳ ದಾಳಿಯಿಂದ ನಶಿಸಿ ಹೋಗುತ್ತಿದೆ. ಗಿಡ ಬೆಳೆಸಲು ಶ್ರಮಿಸಿದ ಸಿಬ್ಬಂದಿ, ಪರಿಸರ ಪ್ರೇಮಿಗಳಿಗೆ ಬೇಸರ ಉಂಟುಮಾಡಿದೆ. ಗಿಡಗಳ ರೆಂಬೆ ಕೊಂಬೆ ಮುರಿದು ಆವರಣ ಕಸದ ತೊಟ್ಟಿಯಾಗಿದೆ. ಪಟಾಕಿ ಸಿಡಿಸಿದರೂ ಹಲಗೆ ಬಾರಿಸಿದರೂ ಕೋತಿಗಳು ಹೋಗುತ್ತಿಲ್ಲ. ಗ್ರಾಪಂ ಆಡಳಿತ ಮಂಡಳಿ ಶೀಘ್ರವೇ ಮಂಗಗಳನ್ನು ಹಿಡಿದು ಸ್ಥಳಾಂತರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
ಕೋತಿಗಳ ಕಾಟ ಹೆಚ್ಚಾಗಿದೆ. ಗಿಡದ ರೆಂಬೆಗಳನ್ನು ಕಡಿಸಿದ್ದೇವೆ. ಅರಣ್ಯ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೋಳ್ಳುತ್ತೇವೆ. ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗಿಲ್ಲ.
ಹನುಮಂತಪ್ಪ ನಾಯಕ, ಪ್ರಭಾರ ಪಿಡಿಒ, ಸೂಳೇಕಲ್