

ಕನಕಗಿರಿ: ಮುಚ್ಚಿದ ಚರಂಡಿಗಳು, ಪಾಳುಬಿದ್ದ ನೀರಿನ ಘಟಕ, ಅಂಗನವಾಡಿಗಳಲ್ಲಿ ಸೌಲಭ್ಯ ಮರೀಚಿಕೆ... ಈ ಎಲ್ಲ ಸಮಸ್ಯೆಗಳಿಂದ ತಾಲೂಕಿನ ಕಲಕೇರ ಗ್ರಾಮ ನಲುಗಿ ಹೋಗಿದೆ. ಗ್ರಾಮ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.
ತಾಲೂಕಿನ ಸುಳೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಲಕೇರ ಗ್ರಾಮವು ಸುಮಾರು 2500 ಜನಸಂಖ್ಯೆಯನ್ನು ಹೊಂದಿದೆ. ತಾಲೂಕು ಕೇಂದ್ರದಿಂದ 6 ಕೀ.ಮೀ ದೂರದಲ್ಲಿದೆ. ಐವರು ಸದಸ್ಯರು ಗ್ರಾಪಂಗೆ ಪ್ರತಿನಿಧಿಸುತ್ತಿದ್ದಾರೆ. ಆದರೆ, ಗ್ರಾಮದ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ನಾನಾ ಸಮಸ್ಯೆಗಳಿಂದ ನಿವಾಸಿಗಳು ರೋಸಿ ಹೋಗಿದ್ದಾರೆ.
ಮುಚ್ಚಿಹೋದ ಚರಂಡಿಗಳು: ಗ್ರಾಮದ ದಲಿತ ಕೇರಿಯ ರಸ್ತೆ ಸೇರಿ ಇತರ ಚರಂಡಿಗಳನ್ನು ಸ್ವಚ್ಛಗೊಳಿಸಿ ಅದೆಷ್ಟೂ ವರ್ಷಗಳಾಗಿವೆ. ಚರಂಡಿ ಹೊಂದಿಕೊಂಡು ಜಾಲಿ ಮರಗಳು ಬೆಳೆದು ನಿಂತಿವೆ. ಇನ್ನು ಕೆಲವೆಡೆ ಇಲ್ಲಿ ಚರಂಡಿ ಇತ್ತಾ!? ಎಂಬುದು ತಿಳಿಯದಂತಾಗಿದೆ. ಚರಂಡಿ ಬ್ಲಾಕ್ ಆದರೆ ಕೊಳಚೆ ನೀರು ಇಲ್ಲೇ ಇರುವ ನೀರಿನ ತೊಟ್ಟಿಗೆ ನುಗ್ಗುತ್ತಿದೆ. ಕೆಲವೆಡೆ ಚರಂಡಿಗಳಿಲ್ಲದೇ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿಯುತ್ತಿದ್ದು, ಓಡಾಟಕ್ಕೆ ಕಂಟಕವಾಗಿ ಪರಿಣಮಿಸಿದೆ.
ಪಾಳುಬಿದ್ದ ನೀರಿನ ಘಟಕ: ಗ್ರಾಮಸ್ಥರಿಗೆ ಶುದ್ಧ ಕುಡಿವ ನೀರು ಒದಗಿಸಲು ಗ್ರಾಮದ ಅಂಗನವಾಡಿ ಪಕ್ಕದಲ್ಲಿ ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದಿಂದ ಲಕ್ಷಾಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಶುದ್ಧ ಕುಡಿವ ನೀರಿನ ಘಟಕ ಜನರಿಗೆ ಉಪಯೋಗವಾಗುವ ಬದಲು ಪಾಳು ಬಿದ್ದಿದೆ. ಗ್ರಾಪಂನವರು ಇದನ್ನು ನಿರ್ವಹಣೆ ಮಾಡದಿರುವುದೇ ಇದಕ್ಕೆಲ್ಲಾ ಕಾರಣವೆನ್ನಲಾಗಿದೆ. ಸ್ಥಳೀಯರು ಅಂಗನವಾಡಿಯ ಕಾಂಪೌಂಡ್ ಏರಿ ಈ ಘಟಕದ ಮುಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಂಗನವಾಡಿಯವರಿಗೆ ತೊಂದರೆಯಾಗುತ್ತಿದೆ.
=========
ಅಂಗನವಾಡಿ ಕೇಂದ್ರಕ್ಕಿಲ್ಲ ಸೌಲಭ್ಯ
ಗ್ರಾಮದ 3ನೇ ಅಂಗನವಾಡಿ ಕೇಂದ್ರಕ್ಕೆ ವಿದ್ಯುತ್, ನೀರಿನ ಅಭಾವ ಕಾಡುತ್ತಿದೆ. ಅಲ್ಲದೇ, ಸಹಾಯಕಿ ಇಲ್ಲವಾದ್ದರಿಂದ ಕಾರ್ಯಕರ್ತೆಯೇ ಎಲ್ಲವನ್ನು ನಿಭಾಯಿಸುವುದು ಕಷ್ಟಕರವಾಗುತ್ತದೆ. ಅಂಗನವಾಡಿಗೆ ಸುತ್ತಲೂ ಆವರಣ ಗೋಡೆ ಇಲ್ಲವಾದ್ದರಿಂದ ಮಕ್ಕಳು ರಸ್ತೆಗೆ ತೆರಳಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಪಾಲಕರ ಭಯವಾಗಿದೆ.
============
ಗ್ರಾಪಂನಿಂದಲೇ ನೀರು ಪೋಲು
ಗ್ರಾಮಕ್ಕೆ ನೀರು ಸರಬರಾಜು ಮಾಡಲು ಇರುವ ಬೋರ್‌ವೆಲ್ ಆರಂಭಗೊಂಡಾಗಲೆಲ್ಲಾ ಇಲ್ಲಿನ ನೀರಿನ ತೊಟ್ಟಿಗೆ ಸದಾ ನೀರು ಹರಿಯುತ್ತದೆ. ನೀರು ಪೋಲಾಗುವುದನ್ನು ತಡೆಯಬೇಕಾದ ಗ್ರಾಪಂನವರೆ ನೀರು ಹರಿಸಿ ಪೋಲು ಮಾಡುತ್ತಿರುವುದು ವಿಪರ್ಯಾಸವಾಗಿದೆ.
============
ಕುಸಿದ ನೀರಿನ ತೊಟ್ಟಿ ತಳಪಾಯ
ಎಸ್ಸಿ ಕಾಲನಿಯ ಅಂಗನವಾಡಿ ಕೇಂದ್ರದ ಪಕ್ಕದಲ್ಲಿ 15ನೇ ಹಣಕಾಸು ಯೋಜನೆಯ 80 ಸಾವಿರ ರೂ. ವೆಚ್ಚದಲ್ಲಿ ಚರಂಡಿ ಮೇಲೆ ಕುಡಿವ ನೀರಿನ ತೊಟ್ಟಿಯನ್ನು ನಿರ್ಮಿಸಲಾಗಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ತಳಪಾಯ ಬಿರುಕು ಬಿಟ್ಟು ಕುಸಿದಿದೆ. ತೊಟ್ಟಿಯಲ್ಲಿ ನೀರು ತುಂಬಿದರೆ ಭಾರಕ್ಕೆ ಅನಾಹುತವಾಗುವ ಆತಂಕ ನಿವಾಸಿಗಳದ್ದಾಗಿದೆ. ಹತ್ತಾರು ಸಮಸ್ಯೆಗಳಿದ್ದರೂ ಗ್ರಾಮ ಪಂಚಾಯಿತಿಯವರು, ಸಂಬಂಧಿಸಿದ ಇಲಾಖೆಯವರು ಕಣ್ಮುಚ್ಚಿ ಕುಳಿತಿರುವುದರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
============
((ಕೋಟ್))
ಕುಡಿವ ನೀರಿನ ಘಟಕ ಗ್ರಾಪಂಗೆ ಹಸ್ತಾಂತರವಾಗಿಲ್ಲ. ಈ ಕುರಿತು ಸಚಿವರ ಕೆಡಿಪಿ ಸಭೆಯಲ್ಲಿಯೂ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದೇನೆ. ಅಂಗನವಾಡಿ ವಿದ್ಯುತ್, ನೀರಿನ ಸೌಲಭ್ಯ ಒದಗಿಸಲಾಗುವುದು. ಕಾಂಪೌಂಡ್ ನಿರ್ಮಾಣಕ್ಕೆ ತಾಪಂಗೆ ಮಾಹಿತಿ ನೀಡಲಾಗುವುದು. ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು. ತಳಪಾಯದಲ್ಲಿ ಕುಸಿದಿರುವ ನೀರಿನ ತೊಟ್ಟಿಯನ್ನು ಪರಿಶೀಲಿಸಲಾಗುವುದು.
ಲಕ್ಷ್ಮಣ ನಾಯಕ
ಪಿಡಿಒ ಗ್ರಾಪಂ ಸುಳೇಕಲ್
=========
((ಕೋಟ್))
ಅಂಗನವಾಡಿ ಕೇಂದ್ರದಲ್ಲಿನ ಕುಡಿವ ನೀರಿನ ಘಟಕ ಹಾಳಾದರೂ ಯಾರು ಗಮನ ಹರಿಸಿಲ್ಲ. ಲಕ್ಷಾಂತರ ರೂ. ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ನೀರನ ಘಟಕ ಬಯಲು ಮೂತ್ರ ವಿಸರ್ಜನೆ ಮಾಡಲು ಬಳಕೆಯಾಗುತ್ತಿದೆ.
ನಿರುಪಾದಿ
ಸ್ಥಳೀಯ
==============
((ಕೋಟ್))
ಗ್ರಾಮದಲ್ಲಿ ಸ್ವಚ್ಛತೆ ಎನ್ನುವುದು ದೂರದ ಮಾತು. ಕಾಮಗಾರಿಗಳು ಕಳಪೆಯಾಗಿವೆ. ಗ್ರಾಪಂನವರು ಈ ಬಗ್ಗೆ ಎಚ್ಚೆತ್ತು ಸರಿಪಡಿಸಬೇಕು. ಅಗತ್ಯವಿದ್ದ ಕಡೆಗೆ ಚರಂಡಿ ನಿರ್ಮಾಣ ಮಾಡಬೇಕು.
ಪಾಮಣ್ಣ
ಗ್ರಾಮಸ್ಥ