

ಕನಕಗಿರಿ: ತಾಲೂಕಿನ ಕರಡಿಗುಡ್ಡ ಗ್ರಾಮದ ಬಳಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕನಕಗಿರಿ ತಾಲೂಕು ಘಟಕದಿಂದ ಬುಧವಾರ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ ಜೀರಾಳ ಮಾತನಾಡಿ, ಕನಕಗಿರಿ ಪಟ್ಟಣ ಸೇರಿ ಸುತ್ತ್ತಲಿನ ಗ್ರಾಮಗಳು ಮೌರ್ಯರು ಹಾಗೂ ವಿಜಯನಗರ ಅರಸರು ಆಳ್ವಿಕೆ ಮಾಡಿದ ಪ್ರದೇಶವಾಗಿದೆ. ಈ ಭಾಗದಲ್ಲಿ ಐತಿಹಾಸಿಕ ಹಾಗೂ ಯಾತ್ರಾ ಸ್ಥಳಗಳಿದ್ದು, ಅನೇಕ ಐತಿಹಾಸಿಕ ಕುರುಹುಗಳು ಇರುವುದನ್ನು ಕಾಣಬಹುದಾಗಿದೆ.
ಭವಿಷ್ಯದ ದೃಷ್ಟಿಯಿಂದ ಉದ್ದೇಶಿಸಿತ ಅಣು ಸ್ಥಾವರ ಕೇಂದ್ರಕ್ಕೆ ತಾಲೂಕಿನ ಕರಡಿಗುಡ್ಡ ಗ್ರಾಮವನ್ನು ಗುರುತಿಸಿರುವುದು ಖಂಡನೀಯ. ಅಲ್ಲದೇ, ಕರಡಿಗುಡ್ಡದಲ್ಲಿ ಜನಮೇಜಯ ಮಹರಾಜರು ಪ್ರತಿಷ್ಠಾಪಿಸಿದ ಹನುಮಂತ ದೇವಸ್ಥಾನವು ಇಲ್ಲಿದ್ದು, ಅಣು ಸ್ಥಾವರದಿಂದ ಇವುಗಳಿಗೆ ಧಕ್ಕೆಯಾಗಲಿದೆ. ಸತತ ಬರದಿಂದ ಇಲ್ಲಿನ ರೈತರು ಆರ್ಥಿಕವಾಗಿ ಹಿಂದುಳಿದಿದ್ದು, ಇದೀಗ ಅಣು ಸ್ಥಾವರ ಸ್ಥಾಪನೆಗೊಂಡರೆ, ಈ ಭಾಗದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆಯಲ್ಲದೇ, ಇರುವ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.
ಇಲ್ಲಿನ ತೋಳಧಾಮ ಸೇರಿ, ಅನೇಕ ವನ್ಯ ಜೀವಿಗಳಿಗೆ ಕಂಟಕವಾಗುವುದರಲ್ಲಿ ಸಂಶಯವಿಲ್ಲ. ಈ ಭಾಗದಲ್ಲಿ ಈಗಾಗಲೇ ಉಷ್ಣಾಂಶ ಹೆಚ್ಚಿದ್ದು, ಮತ್ತಷ್ಟು ಸಮಸ್ಯೆಗಳನ್ನು ತಂದೊಡ್ಡಲಿದೆ. ಜಿಲ್ಲಾಧಿಕಾರಿಗಳು ಈ ಭಾಗದ ಇತಿಹಾಸವನ್ನು ತಿಳಿದುಕೊಂಡು ವರದಿ ಸಲ್ಲಿಸಬೇಕು ಎಂದರು.