ಕನಕಗಿರಿಯಲ್ಲಿ ಗರುಡೋತ್ಸವ ಅದ್ದೂರಿ

GARUDOTHAVA
ಕನಕಗಿರಿಯಲ್ಲಿ ಕನಕಾಚಲಪತಿ ಲಕ್ಷ್ಮೀನರಸಿಂಹ ಜಾತ್ರೆ ನಿಮಿತ್ತ ಗರುಡೋತ್ಸವ ಮೆರವಣಿಗೆ ಭಾನುವಾರ ಬೆಳಗಿನ ಜಾವ ರಾಜಬೀದಿಯಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.
Published on

ಕನಕಗಿರಿ: ಇಲ್ಲಿನ ಶ್ರೀಕನಕಾಚಲ ಲಕ್ಷ್ಮೀ ನರಸಿಂಹ ಜಾತ್ರೆಯ ನಿಮಿತ್ತ ಭಾನುವಾರ ಬೆಳಗಿನ ಜಾವ ಗರುಡೋತ್ಸವ ರಾಜಬೀದಿಯಲ್ಲಿ ವೈಭವದಿಂದ ಜರುಗಿತು. ಉತ್ಸವ ರಾಜಬೀದಿಯ ಮೂಲಕ ಎದುರು ಹನುಮಪ್ಪನ ದೇವಸ್ಥಾನ ತಲುಪಿ ಸ್ವಸ್ಥಾನಕ್ಕೆ ಮರಳಿತು.

ಬಂಗಾರ ವರ್ಣದ ಗರುಡ ವಾಹನದ ಮೇಲೆ ಬೃಹತ್ ನೀಲಿ ಪಟ ಹೊಂದಿದ ಉಚ್ಛಾಯದಲ್ಲಿ ಲಕ್ಷ್ಮೀ ನರಸಿಂಹನು ಶ್ರೀದೇವಿ ಭೂದೇವಿಯರೊಂದಿಗೆ ಸಾಗಿದನು. ಭಕ್ತರು ದಿವಟಗಿ ಹಿಡಿದು ಕೊಬ್ಬರಿ, ಕರ್ಫೂರ ಸುಟ್ಟು ಪಂಜಿನ ಬೆಳಕಿನಲ್ಲಿ ಪಟ್ಟಣದ ರಾಜಬೀದಿಯಲ್ಲಿ ಸಡಗರ, ಸಂಭ್ರಮದಿಂದ ಮೆರವಣಿಗೆ ನಡೆಸಿದರು.

ಭಕ್ತರು ಹಾಗೂ ದೇವಸ್ಥಾನ ಆಡಳಿತ ಮಂಡಳಿ ರಾಜಬೀದಿಯುದ್ದಕ್ಕೂ ಚಿತ್ತಾಕರ್ಷಕ ಪಟಾಕಿ ಸಿಡಿಸಿದರು. ಗರುಡೋತ್ಸವ ಮೆರವಣಿಗೆ ಸೂರ್ಯ ಮೂಡುವ ಮೊದಲೇ ಮೂಲಸ್ಥಾನಕ್ಕೆ ತಲುಪಿತು. ಭಕ್ತರು ಗೋವಿಂದಾ ಗೋವಿಂದಾ ಎಂದು ಭಕ್ತಿ ಸಮರ್ಪಿಸಿದರು. ಗೊಲ್ಲ ಜನಾಂಗದವರು ಹಳದಿ ವಸ್ತ್ರಾದಾರಿಗಳಾಗಿ ಗಮನ ಸೆಳೆದರು. ಗರುಡೋತ್ಸವ ಮೆರವಣಿಗೆಗೆ ಸೂರ್ಯಬಾಬು ಚಿತ್ತಾಕರ್ಷರದ ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದರು.

ಸಚಿವ ಶಿವರಾಜ ತಂಗಡಗಿ, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ, ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್, ಮಾಜಿ ಶಾಸಕ ಬಸವರಾಜ ದಢೇಸುಗೂರು ಇತರರ ಪ್ರಮುಖ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net