ಶ್ರೀ ರಾಮಾನುಜರ ಉತ್ಸವ ಮೂರ್ತಿ ಮೆರವಣಿಗೆ

Utsav Murti procession,
ಕನಕಗಿರಿಯ ತೇರು ಬೀದಿಯಲ್ಲಿ ರಾಮಾನುಜಾರ್ಯರ ಜಯಂತಿ ನಿಮಿತ್ತ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ಪ್ರಮುಖರಾದ ಗುಂಡಪ್ಪ ಚಿತ್ರಗಾರ, ಹನುಮಂತರೆಡ್ಡಿ ಚಿತ್ರಗಾರ ಇತರರಿದ್ದರು.
Published on

ಕನಕಗಿರಿ: ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ (ಜಯಂತಿ)ಯನ್ನು ಸ್ಥಳೀಯ ಕಲ್ಯಾಣ ಕರ್ನಾಟಕ ಶ್ರೀ ವೈಷ್ಣವ ಮಹಾಸಭಾ ವತಿಯಿಂದ ಗುರುವಾರ ಆಚರಿಸಲಾಯಿತು.

ಜಯಂತಿ ನಿಮಿತ್ತ ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಿಂದ ಆರಂಭಗೊಂಡ ರಾಮಾನುಜರ ಮೂರ್ತಿಯನ್ನೊತ್ತ ಉತ್ಸವವು ತೇರಿನ ಹನುಮಪ್ಪ ದೇವಸ್ಥಾನದವರೆಗೆ ಸಾಗಿ ಮರಳಿ ಪ್ರತಾಪರಾಯ ದೇವಸ್ಥಾನ, ವಾಲ್ಮೀಕಿ ವೃತ್ತ, ಅಯ್ಯಪ್ಪಸ್ವಾಮಿ ದೇವಸ್ಥಾನ ಮಾರ್ಗವಾಗಿ ಐತಿಹಾಸಿಕ ಶ್ರೀ ತೊಂಡಿತೇವರಪ್ಪ (ಪ್ರಾಣ ದೇವರು) ದೇವಸ್ಥಾನದವರೆಗೆ ಅದ್ದೂರಿಯಾಗಿ ಜರುಗಿತು.

ಕನಕಾಚಲಪತಿ ಹಾಗೂ ರಾಘವೇಂದ್ರಸ್ವಾಮಿ ಭಜನಾ ಸಂಘದವರಿಂದ ಹರಿ ಭಜನೆ ನಡೆಯಿತು. ರಾಮಾನುಜರ ತಿರುನಕ್ಷತ್ರ ಹಿನ್ನೆಲೆಯಲ್ಲಿ ಕನಕಾಚಲಪತಿ ಹಾಗೂ ತೊಂಡಿತೇವರೇಶನಿಗೆ ವಿಶಿಷ್ಟ ಪೂಜೆ, ಪುಷ್ಪಾಲಂಕಾರ, ಅಭಿಷೇಕ ನೆರವೇರಿಸಲಾಯಿತು. ಮೆರವಣಿಗೆ ಸಂಪನ್ನ ನಂತರ ಭಕ್ತರಿಗೆ ತೀರ್ಥ ಪ್ರಸಾದ ಏರ್ಪಡಿಸಲಾಗಿತ್ತು.

ಪ್ರಮುಖರಾದ ವೆಂಕಟ ಮಧುಸೂದನ, ಸುರೇಶರೆಡ್ಡಿ ಮಹಲಿನಮನಿ, ಕಂಠಿರಂಗಪ್ಪ, ವೆಂಕಟೇಶ ಕುಲಕರ್ಣಿ, ಗುಂಡಪ್ಪ ಚಿತ್ರಗಾರ, ಹನುಮಂತರೆಡ್ಡಿ ಚಿತ್ರಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net