

ಕನಕಗಿರಿ: ಶ್ರೀರಾಮನವಮಿ ನಿಮಿತ್ತ ಪಟ್ಟಣದ ಹನುಮ ಮಾಲಾ ಸೇವಾ ಸಮಿತಿಯಿಂದ ಶ್ರೀರಾಮನ ಭಾವಚಿತ್ರ ಮೆರವಣಿಗೆ ಬುಧವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಮೇಲುಗಡೆ ಅಗಸಿ ಹನುಮಪ್ಪ ದೇಗುಲದಿಂದ ಆರಂಭಗೊಂಡ ಮೆರವಣಿಗೆ, ರಾಜಬೀದಿ ಮೂಲಕ ಸಾಗಿ ಶ್ರೀ ಕನಕಾಚಲಪತಿ ದೇವಸ್ಥಾನ, ವಾಲ್ಮೀಕಿ ವೃತ್ತ ಮಾರ್ಗವಾಗಿ ತಾವರಗೇರಾ ರಸ್ತೆಯ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಜರುಗಿತು.
ಮಾಲಾಧಾರಿಗಳಿಂದ ಶ್ರೀರಾಮ ಹಾಗೂ ಆಂಜನೇಯನ ಜಪ, ಭಜನಾ ಕಾರ್ಯಕ್ರಮ ನಡೆಯಿತು. ವಾದ್ಯಗಳ ನಾದಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಶ್ರೀರಾಮನವಮಿ ನಿಮಿತ್ತ ಮಾಲಾಧಾರಿಗಳಿಂದ 125 ಹಾಗೂ 140 ಕೆಜಿ ಭಾರದ ಗುಂಡು ಎತ್ತುವ ಸ್ಪರ್ಧೆ ನಡೆಯಿತು. ಸಿದ್ದ ಹಡಪದ 140 ಕೆಜಿ ತೂಕದ ಗುಂಡು ಎತ್ತಿ ಶಕ್ತಿ ಪ್ರದರ್ಶನ ಮಾಡಿದರು. ಸಂಪತ್ ಹೋಟೆಲ್, ವೀರೇಶ ರೊಟ್ಟಿ, ವೆಂಕಟೇಶ ದಾಸರ, ತಿಮ್ಮಣ್ಣ, ಬಸವರಾಜ ದಾಸರ 100 ಕೆಜಿಯ ಗುಂಡು ಎತ್ತಿ ಸಂಭ್ರಮಿಸಿದರು.
ಪ್ರಮುಖರಾದ ಗಂಗಾಧರ ಯಲಬುರ್ಗಿ, ಸಗರಪ್ಪ ಕುಂಬಾರ, ವೆಂಕೋಬ ಪೂಜಾರ, ಮಂಜು ಗ್ಯಾಸ್, ಪಂಪಾಪತಿ ಹಡಪದ, ಯಮನೂರಪ್ಪ ಗಂಗಾಮತ, ಗೋಪಿನಾಥ ಗೊಂದಳೆ, ದಶರಥ, ಪರಶುರಾಮ, ಶ್ರೀನಿವಾಸ, ಚಂದ್ರಶೇಖರ ತಾವರಗೇರಾ, ಪ್ರವೀಣ ಮುಸಲಾಪೂರ, ಕಿರಣಕುಮಾರ್, ರವಿಕುಮಾರ ಗಂಗಾಮತ, ಶ್ರೀಕಾಂತ, ಅಮರೇಶ, ಅನಿಲಕುಮಾರ ಇತರರಿದ್ದರು.