

ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಕ್ಕೆ ವೃದ್ಧೆ ಭಕ್ತೆಯೊಬ್ಬರು 2 ಲಕ್ಷ ರೂ. ನಗದನ್ನು ಕಾಣಿಕೆಯಾಗಿ ಶನಿವಾರ ನೀಡಿದ್ದಾರೆ.
ಇಲಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮದ 80 ವರ್ಷದ ಯಮನವ್ವ ಮಲ್ಲಪ್ಪ ಹಡಪದ ಎನ್ನುವ ಭಕ್ತೆ, ಒಬ್ಬರೇ ದೇವಸ್ಥಾನಕ್ಕೆ ಆಗಮಿಸಿ 2 ಲಕ್ಷ ರೂ. ನಗದನ್ನು ದೇವಸ್ಥಾನಕ್ಕೆ ಕಾಣಿಕೆ ನೀಡಿದ್ದಾರೆ. ಕನಕಾಚಲಪತಿಯು ಯಮನವ್ವಳ ಮನೆ ದೇವರಾಗಿದ್ದು, ಇಷ್ಟಾರ್ಥ ಸಿದ್ದಿಯಾಗಿದ್ದರಿಂದ ದೇವಸ್ಥಾನಕ್ಕೆ ಕಾಣಿಕೆ ನೀಡಿದ್ದಾರೆ ಎನ್ನಲಾಗಿದೆ. ಫೋಟೋ ತೆಗೆಯದಂತೆ ಮನವಿ ಮಾಡಿ ತಾನು ತಂದಿದ್ದ ಹಣವನ್ನು ದೇವಸ್ಥಾನದ ಕಾರ್ಯಾಲಯಕ್ಕೆ ನೀಡಿ ರಸೀದಿ ಪಡೆದಿದ್ದಾರೆ.
ಈವರೆಗೆ 50 ಸಾವಿರ ರೂ. ನಗದು ಕಾಣಿಕೆ ನೀಡಿದ್ದೇ ಅತೀ ಹೆಚ್ಚಿನ ಮೊತ್ತವಾಗಿದ್ದು, ಈಗ ಯಮನವ್ವ ನೀಡಿರುವ ಮೊತ್ತ ದೊಡ್ಡದಾಗಿದೆ. ನಗದು ಸ್ವೀಕರಿಸಿದ ದೇವಸ್ಥಾನ ಸಮಿತಿಯು ಭಕ್ತೆ ಯಮನವ್ವಳನ್ನು ಗೌರವಿಸಿದೆ ಎಂದು ದೇವಸ್ಥಾನದ ಸಿಬ್ಬಂದಿ ತಿಳಿಸಿದ್ದಾರೆ.