

ಕನಕಗಿರಿ: ಪೌರಾಣಿಕ ಪ್ರಸಿದ್ಧ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರಾ ಮಾಹೋತ್ಸವ ನಿಮಿತ್ತ ಪಟ್ಟಣದಲ್ಲಿ ಗುರುವಾರ ಬೆಳಗಿನ ಜಾವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಗೋವಿಂದ ನಾಮಸ್ಮರಣೆಯೊಂದಿಗೆ ವಿಜೃಂಭಣೆಯ ಗರುಡೋತ್ಸ ಜರುಗಿತು.
ಬೆಳಗಿನ ಜಾವ 4.50ಕ್ಕೆ ಕನಕಾಚಲಪತಿ ದೇವಸ್ಥಾನದಿಂದ ಆರಂಭವಾದ ಗರುಡೋತ್ಸವವು, ರಾಜಬೀದಿಯ ಮೂಲಕ ಎದುರು ಹನುಮಪ್ಪನ ದೇವಸ್ಥಾನ ತಲುಪಿ ಸ್ವಸ್ಥಾನಕ್ಕೆ ಮರಳಿತು.
ಬಂಗಾರ ವರ್ಣದ ಗರುಡ ವಾಹನ ಮೂರ್ತಿಯ ಮೇಲೆ ಸಂಪ್ರದಾಯದಂತೆ ಹತ್ತಾರು ಕಾರ್ಮಿಕರಿಂದ ತಯಾರಿಸಿದ ಬೃಹತ್ ನೀಲಿ ಪಟ ಹೊಂದಿದ ಉಚ್ಛಾಯದಲ್ಲಿ ಲಕ್ಷ್ಮೀ ನರಸಿಂಹನು ಶ್ರೀದೇವಿ ಭೂದೇವಿಯರೊಂದಿಗೆ ಸಾಗಿದನು. ಭಕ್ತರು ದಿವಟಗಿ ಹಿಡಿದು ಕೊಬ್ಬರಿ, ಕರ್ಪೂರ ಸುಟ್ಟು ಪಂಜಿನ ಬೆಳಕಿನಲ್ಲಿ ರಾಜಬೀದಿಯಲ್ಲಿ ಸಡಗರ, ಸಂಭ್ರಮದಿಂದ ಮೆರವಣಿಗೆ ನಡೆಸಿದರು.
ಶ್ರೀರಾಮನಗರ ತಂಡದ ಕೋಲಾಟ ಗಮನ ಸೆಳೆಯಿತು. ಭಕ್ತರು ಹಾಗೂ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಮೆರವಣಿಗೆಯುದ್ದಕ್ಕೂ ಸಿಡಿಸಿದ ಪಟಾಕಿಗಳ ಚಿತ್ತಾಕರ್ಷಕ ಚಿತ್ತಾರಗಳು ಎಲ್ಲರನ್ನು ಮೂಕ ವಿಸ್ಮಿತರನ್ನಾಗಿಸಿದವು. ಗರುಡೋತ್ಸವ ಮೆರವಣಿಗೆ ಸೂರ್ಯೋದಯ ಮುನ್ನವೇ ಮೂಲಸ್ಥಾನ ತಲುಪಿತು. ಗೊಲ್ಲ ಜನಾಂಗದವರು ಹಳದಿ ವಸ್ತ್ರಧಾರಿಗಳಾಗಿ ಗಮನ ಸೆಳೆದರು. ಹಿರಿಯ ಶ್ರೇಣಿ ನ್ಯಾಯಾಧೀಶರಾದ ರಮೇಶ ಗಾಣಿಗೇರ, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸದಾನಂದ ನಾಯ್ಕ, ಹೆಚ್ಚುವರಿ ಕಿರಿಯ ಶ್ರೇಣಿ ನ್ಯಾಯಾಧೀಶರಾದ ನಾಗೇಶ ಪಾಟೀಲ್, ಮಾಜಿ ಶಾಸಕರಾದ ಬಸವರಾಜ ದಢೇಸುಗೂರು, ಪ್ರತಾಪಗೌಡ ಪಾಟೀಲ್, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಗುರುವಾರ ಬೆಳಗಿನ ಜಾವ 2 ಗಂಟೆಯಿಂದ ನಡೆದ ಕಲ್ಯಾಣೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರುಡಿ ಕುಟುಂಬದವರು ಶ್ರೀ ಕನಕಾಚಲಪತಿಗೆ ಶ್ರೀದೇವಿ, ಭೂದೇವಿಯರನ್ನು ಕನ್ಯಾದಾನ ಮಾಡಿದರೆ, ಅರ್ಚಕರ ಕುಟುಂಬವು ಕನಕಾಚಲಪತಿ(ಗಂಡಿನ)ಪೌರೋಹಿತ್ಯ ವಹಿಸಿಕೊಂಡು ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ಜರುಗಿತು. ಗರುಡೋತ್ಸವ ಬಳಿಕ ನೆರೆದಿದ್ದ ಭಕ್ತರಿಗಾಗಿ ನಾನಾ ದಾನಿಗಳು ನಾ ಮುಂದು ತಾ ಮುಂದು ಎನ್ನುವಂತೆ ನಾನಾ ಬಗೆಯ ಉಪಹಾರ ತಯಾರಿಸಿ ಉಣಬಡಿಸಿದರು.
ಕಾಣಿಕೆ ನೀಡಿದ ಮಾಂಗಲ್ಯಕ್ಕಾಗಿ ವಿಳಂಬ: ಕ್ಷೇತ್ರದ ಶಾಸಕರೂ ಆದ ಸಚಿವ ಶಿವರಾಜ ತಂಗಡಗಿ ಮಾಂಗಲ್ಯ ಇತರ ಆಭರಣಗಳನ್ನು ಇತ್ತೀಚೆಗೆ ಕಾಣಿಕೆ ನೀಡಿದ್ದರು. ಇವುಗಳನ್ನು ಕಲ್ಯಾಣೋತ್ಸವದಲ್ಲಿ ಶ್ರೀದೇವಿ, ಭೂದೇವಿಯರಿಗೆ ಧಾರಣೆ ಮಾಡದೆ ಹಾಗೇ ಉಳಿಸಿಕೊಳ್ಳಲಾಗಿತ್ತು. ಹೀಗಾಗಿ ಕಾಣಿಕೆ ನೀಡಿದ ಮಾಂಗಲ್ಯ ತಂದು ದೇವರಿಗೆ ಹಾಕುವಂತೆ ಸಚಿವರು ಸೂಚಿಸಿದರು. ಇದನ್ನು ಹುಡುಕಿ ತರುವವರೆಗೂ ಕಾರ್ಯಕ್ರಮ ವಿಳಂಬವಾಯಿತು.
ಈಸು ಮುರಿದು ಆತಂಕ: ಗರುಡೋತ್ಸವ ದೇವಸ್ಥಾನದಿಂದ ಹೊರಗೆ ಬಂದು ದ್ವಾರ ಬಾಗಿಲ ಬಳಿ ನಿಂತು ಬೃಹತ್ ನೀಲಿಪಟವನ್ನು ಕಟ್ಟಿದ ಬಳಿಕ ಭಕ್ತರು ಪೂಜೆ ಸಲ್ಲಿಸುವಾಗ ಎದುರಿಗೆ ನಿಂತಿದ್ದ ಹನುಮಂತೋತ್ಸವದ ಮೇಲೆ ಹತ್ತಾರು ಜನ ನಿಂತಿದ್ದರಿಂದ ಉಚ್ಛಾಯದ ಇರುಸು (ಈಸು) ಮುರಿದು ಕೆಲ ಕಾಲ ಆತಂಕ ಸೃಷ್ಠಿಸಿತ್ತು. ಆದರೆ, ಹನುಮಂತೋತ್ಸವದ ಇನ್ನೆರಡು ಮರದ ದಿನ್ನೆಗಳು ಉಚ್ಛಾಯ ನೆಲಕ್ಕೆ ಬೀಳದಂತೆ ತಡೆದವು. ಪೊಲೀಸರು ಎಲ್ಲರನ್ನು ಅಲ್ಲಿಂದ ತೆರವುಗೊಳಿಸಿ ಗರುಡೋತ್ಸವಕ್ಕೆ ಅನುವು ಮಾಡಿಕೊಟ್ಟರು.