

ಕನಕಗಿರಿ: ಹಲವು ವರ್ಷಗಳ ಭಕ್ತರ ಬೇಡಿಕೆಯಾಗಿದ್ದ ಶ್ರೀ ಕನಕಾಚಲ ಲಕ್ಷ್ಮೀನರಸಿಂಹ ಸ್ವಾಮಿಯ ರಥ ಸಾಗುವ ತೇರುಬೀದಿಯನ್ನು 2.2 ಕೋಟಿ ರೂ. ವೆಚ್ಚದಲ್ಲಿ ನಗರೋತ್ಥಾನ ಯೋಜನೆಯಡಿ ಡಾಂಬರೀಕರಣಗೊಳಿಸಲು ಭಾನುವಾರ ಶಾಸಕ ಬಸವರಾಜ ದಢೇಸುಗೂರು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ರಥ ಸಾಗುವಾಗ ರಸ್ತೆ ಕುಸಿದು ತೇರು ಸಿಲುಕುಕೊಳ್ಳುತ್ತಿದ್ದರಿಂದ ಭಕ್ತರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಜಾತ್ರೆ ಬಂದಾಗಲೊಮ್ಮೆ ರಸ್ತೆಗೆ ತೇಪೆ ಹಾಕುವ ಕಾರ್ಯ ಮುಂದುವರಿದಿತ್ತು. ಆದರೆ, ಕಳೆದ ವರ್ಷ ತೇರುಬೀದಿಯನ್ನು ಸಿಸಿ ರಸ್ತೆಯಾಗಿಸಲು ಯೋಜನೆ ಸಿದ್ಧಪಡಿಸಲಾಗಿದ್ದು, ಇದಕ್ಕೆ ಒಪ್ಪಿಗೆಯಿಲ್ಲವಾಗಿತ್ತು ಎನ್ನಲಾಗಿತ್ತು. ಇದರಿಂದ ಪುನಃ ರಸ್ತೆಗೆ ಉತ್ತಮ ಗುಣಮಟ್ಟದಲ್ಲಿ ಡಾಂಬರೀಕರಣ ಮಾಡಲು ಮುಂದಾಗಿದ್ದು, 2.2ಕೋಟಿ ರೂ. ವೆಚ್ಚದಲ್ಲಿ ಯೋಜನೆ ತಯಾರಿಸಿ ಭೂಮಿಪೂಜೆಯನ್ನು ಶಾಸಕರು ನೆರವೇರಿಸಿದ್ದಾರೆ. ಕಾಮಗಾರಿಗೆ ಯಾವುದೇ ಅಡ್ಡಿ ಆತಂಕ ಬಾರದೆ ಗುಣಮಟ್ಟದಿಂದ ಕೂಡಿ ರಥೋತ್ಸವ ಸಂದರ್ಭದಲ್ಲಿ ಯಾವುದೇ ತೊಂದರೆಯಾಗದಂತೆ ರಸ್ತೆ ನಿರ್ಮಾಣವಾಗಲಿ ಎಂಬುದು ಭಕ್ತರ ಆಶಯವಾಗಿದೆ.
ಕನಕಾಚಲಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಹಿರಿಯರಾದ ಕನಕರೆಡ್ಡಿ ಮಹಲಿನಮನಿ, ಕರಿಬಸಪ್ಪ ಸಮಗಂಡಿ, ವಾಗೀಶ ಹಿರೇಮಠ, ಪ್ರಕಾಶ ಹಾದಿಮನಿ, ರಂಗಪ್ಪ ಕೊರಗಟಗಿ, ವೀರೇಶ ಕಡಿ, ರುದ್ರಮುನಿಸ್ವಾಮಿ, ವೀರಣ್ಣ ಉಪ್ಪಾರ, ರಾಮಣ್ಣ ಪಿನ್ನಿ, ರಾಮಾಂಜನೇಯರೆಡ್ಡಿ ಇತರರಿದ್ದರು.
ಪೂರ್ವಭಾವಿ ಸಭೆಯಲ್ಲಿ ಚರ್ಚೆ: ಕಳೆದ ವರ್ಷದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಶಾಸಕ ದಢೇಸುಗೂರು ತೇರುಬೀದಿಯನ್ನು 2023ರ ಜಾತ್ರೆ ವೇಳೆಗೆ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಕೊಟ್ಟ ಭರವಸೆ ಈಡೇರಿಸಿರಲಿಲ್ಲ. ಇದರಿಂದ ಈ ಬಾರಿಯ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶಾಸಕರಿಗೆ ಭಕ್ತರು ತರಾಟೆಗೆ ತೆಗೆದುಕೊಂಡಿದ್ದರು. ಆಗ ರಸ್ತೆ ನಿರ್ಮಾಣಕ್ಕಾಗಿದ್ದ ತಾಂತ್ರಿಕ ತೊಂದರೆಗಳನ್ನು ಅಧಿಕಾರಿಗಳು ಬಿಡಿಸಿಟ್ಟಿದ್ದು, ಸಮಸ್ಯೆಯನ್ನು ಜಾತ್ರೆ ನಂತರ ಕಾಮಗಾರಿಗೆ ಪೂಜೆ ಸಲ್ಲಿಸುವ ಭರವಸೆಯನ್ನು ಶಾಸಕರು ನೀಡಿದ್ದರು. ಅದರಂತೆ ಚುನಾವಣೆಗೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ಕಾಮಗಾರಿಗೆ ತಾರಾತುರಿಯಲ್ಲಿ ಪೂಜೆ ಸಲ್ಲಿಸಿದ್ದಾರೆ.
(27ಕೆಎನ್‌ಕೆ2)