

ಕನಕಗಿರಿ: ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ಜಾತ್ರೆ ನಿಮಿತ್ತ ಪಟ್ಟಣದ ರಾಜಬೀದಿಯಲ್ಲಿ ಸೋಮವಾರ ನಸುಕಿನ ಜಾವ ಗರುಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ನೀಲಿ ಪಟ ಹೊಂದಿದ ಲಕ್ಷ್ಮೀ ನರಸಿಂಹನನ್ನು ಹೊತ್ತ ಉಚ್ಚಾಯವು ರಾಜಬೀದಿಯಲ್ಲಿ ಸಾಗಿತು. ಭಕ್ತರು ದಿವಟಗಿ ಹಿಡಿದು ಕೊಬ್ಬರಿ, ಕರ್ಪೂರ ಸುಟ್ಟು ಮತ್ತು ಪಂಜಿನ ಬೆಳಕಿನಲ್ಲಿ ಸಡಗರ, ಸಂಭ್ರಮದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಸ್ಥಾನ ಆಡಳಿತ ಮಂಡಳಿ, ಭಕ್ತರು ರಾಜಬೀದಿಯುದ್ದಕ್ಕೂ ಚಿತ್ತಾಕರ್ಷಕ ಪಟಾಕಿ ಸಿಡಿಸಿದರು. ಗೋವಿಂದಾ… ಗೋವಿಂದಾ.. ಎಂದು ಜಯಘೋಷ ಮೊಳಗಿಸಿದರು. ನಂತರ ಗರುಡೋತ್ಸವ ಮೆರವಣಿಗೆ ಸೂರ್ಯ ಮೂಡುವ ಮೊದಲೇ ಮೂಲಸ್ಥಾನ ತಲುಪಿತು. ಗೊಲ್ಲ ಸಮುದಾಯದವರು ಹಳದಿ ವಸ್ತ್ರಧಾರಿಗಳಾಗಿ ಗಮನ ಸೆಳೆದರು. ಗರುಡೋತ್ಸವ ಮೆರವಣಿಗೆಗೆ ಸೂರ್ಯಬಾಬು ಬೆಳಕಿನ ವ್ಯವಸ್ಥೆ ಕಲ್ಪಿಸಿದ್ದರು.
ಭಾನುವಾರ ತಡರಾತ್ರಿ ಅರ್ಚಕರು ಕನಕಾಚಲಪತಿ(ಗಂಡಿನ)ಪೌರೋಹಿತ್ಯವನ್ನು ವಹಿಸಿಕೊಂಡಿದ್ದರು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡ, ಶಾಸಕರು ಲಕ್ಷ್ಮೀಯನ್ನು ಕನಕಾಚಲಪತಿಗೆ ಕನ್ಯಾದಾನ ಮಾಡುವುದರ ಮೂಲಕ ಕಲ್ಯಾಣೋತ್ಸವ(ಮದುವೆ) ನಡೆಸಿಕೊಟ್ಟರು.