

ಮಧುಸೂದನ ಎಚ್. ಮಾದಿನಾಳಕನಕಗಿರಿ: ಸರ್ಕಾರ ದಾನ ಪಡೆದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಈ ಹಿಂದೆ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕಾಗಿ ಮೀಸಲಿದ್ದ ಕಲಕೇರಿ ರಸ್ತೆಯಲ್ಲಿನ 3.39 ಎಕರೆ ಜಾಗವನ್ನು ತಾಲೂಕು ಕ್ರೀಡಾಂಗಣಕ್ಕೆ ಹಸ್ತಾಂತರಿಸುವಂತೆ ತಹಸಿಲ್ ಕಚೇರಿಯಿಂದ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಸವರಾಜ ದಢೇಸುಗೂರು ಶಾಸಕರಾಗಿದ್ದ ವೇಳೆ 2022ರ ಜುಲೈನಲ್ಲಿ ಕನಕಗಿರಿ ಪಟ್ಟಣದ ಸರ್ವೇ ನಂ.146/*/*ರ 3.39 ಎಕರೆ ಸರ್ಕಾರಿ ಜಮೀನನ್ನು ತಾಲೂಕು ಆಡಳಿತ ಕಚೇರಿ ನಿರ್ಮಾಣಕ್ಕಾಗಿ ಮೀಸಲಿರಿಸಲಾಗಿತ್ತು. 2023ರ ಚುನಾವಣೆಯಲ್ಲಿ ಸಚಿವ ಶಿವರಾಜ ತಂಗಡಗಿ ಶಾಸಕರಾಗಿ ಆಯ್ಕೆಯಾದ ಬಳಿಕ ಕಾಯ್ದಿರಿಸಿದ್ದ ಸ್ಥಳದಲ್ಲಿ ಆಡಳಿತ ಸೌಧ ನಿರ್ಮಾಣಕ್ಕೆ ಮನಸ್ಸು ಮಾಡಲಿಲ್ಲ. ಬದಲಾಗಿ ಗಂಗಾವತಿ ರಸ್ತೆಯಲ್ಲಿನ ಶಮ್ಸ್ ಏ ತಬ್ರೇಜ್ ಇವರು ದಾನ ನೀಡಿದ ಸರ್ವೇ ನಂ.187/*/4 ಹಾಗೂ 189/*/9 ಜಮೀನಿನ ಪೈಕಿ 3 ಎಕರೆ ಜಮೀನಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಈ ಮೊದಲು ಆಡಳಿತ ಸೌಧಕ್ಕೆ ಕಾಯ್ದಿರಿಸಿದ್ದ 3.39 ಎಕರೆ ಜಮೀನು ಉದ್ದೇಶಿತ ಯೋಜನೆಗೆ ಬಳಕೆಯಾಗುತ್ತಿಲ್ಲ. ಸದರಿ ಜಮೀನನ್ನು ತಾಲೂಕು ಕ್ರೀಡಾಂಗಣಕ್ಕೆ ಬಳಸಿಕೊಳ್ಳಲು ಜು.7ರಂದು ಜಿಲ್ಲಾ ಆಡಳಿತ ಭವನದಲ್ಲಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎನ್ನಲಾಗಿದೆ.
ಅದರಂತೆ ತಹಸೀಲ್ದಾರ್ ವಿಶ್ವನಾಥ ಮುರುಡಿ, ಸಚಿವರ ಸಭೆಯ ನಿರ್ದೇಶನ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಪತ್ರ ಮತ್ತು ಕಂದಾಯ ನಿರೀಕ್ಷಕರ ವರದಿಯನ್ನು ಉಲ್ಲೇಖಿಸಿ ಜು.21ರಂದು ಈ ಮೊದಲು ಪ್ರಜಾಸೌಧಕ್ಕೆ ಕಾಯ್ದಿರಿಸಿದ ಜಾಗವನ್ನು ರದ್ದುಪಡಿಸಿ ತಾಲೂಕು ಕ್ರೀಡಾಂಗಣಕ್ಕೆ ಭೂಮಿ ಹಸ್ತಾಂತರಿಸಲು ಯೋಗ್ಯವಿರುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ.
ಸಚಿವ ಶಿವರಾಜ ತಂಗಡಗಿ 2008ರಲ್ಲಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿ ಸಚಿವರಾದ ಬಳಿಕ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಆಸಕ್ತಿ ಹೊಂದಿದ್ದು, ಇದಕ್ಕಾಗಿ 50 ಲಕ್ಷ ರೂ. ಮಂಜೂರು ಮಾಡಿಸಿದ್ದರು. ಆದರೆ, ಆಗ ಜಾಗ ದೊರೆತಿರಲಿಲ್ಲ ಎನ್ನುವ ಕಾರಣಕ್ಕೆ ಪಟ್ಟಣದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿರಲಿಲ್ಲ. ಇದೀಗ ತಾಲೂಕು ಕೇಂದ್ರವಾಗಿ 8.5 ವರ್ಷದ ಬಳಿಕ ಮತ್ತೆ ಕ್ರೀಡಾಂಗಣ ನಿರ್ಮಾಣ ಮುನ್ನೆಲೆಗೆ ಬಂದಿದ್ದು, ಜಾಗವೇನೋ ದೊರೆಯುವ ಭರವಸೆಯಿದೆ. ಆದರೆ, ಅದಕ್ಕೆ ಅನುದಾನ ದೊರೆತು ನಿರ್ಮಾಣವಾಗಿ ಕ್ರೀಡಾಪಟುಗಳಿಗೆ ಅನುಕೂಲವಾಗಲು ಇನ್ನೇಷ್ಟು ದಿನ ಹಿಡಿಯುತ್ತದಯೋ ಕಾದು ನೋಡಬೇಕು.
ಕ್ರೀಡಾಂಗಣ ಜತೆಗೆ ಕೆಲ ಜಾಗ ಬಳಸಿಕೊಂಡು ಈಜು ಕೊಳ ನಿರ್ಮಿಸಲು ಯೋಚನೆ ಇರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಕ್ರೀಡಾಂಗಣ ಹಾಗೂ ಈಜುಕೋಳ ಎರಡೂ ಒಂದೇ ಕಡೆಯಾದರೆ, ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶವಿದೆ.
ಕ್ಷೇತ್ರ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು 200 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾಗುವುದು. ತಾಲೂಕು ಕ್ರೀಡಾಂಗಣಕ್ಕೆ ಜಾಗ ಹಸ್ತಾಂತರವಾದ ಬಳಿಕ ಆದಷ್ಟು ಬೇಗ ಅನುದಾನ ತಂದು ಕ್ರೀಡಾಂಗಣ ನಿರ್ಮಾಣ ನಂತರ ಕನಕಗಿರಿ, ಕಾರಟಗಿ ನಗರಗಳ ಅಭಿವೃದ್ಧಿ ಮಾಡುವ ಯೋಜನೆಯಿದೆ. | ಶಿವರಾಜ ತಂಗಡಗಿ ಸಚಿವ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ನೇತೃತ್ವದ ಸಭೆಯ ನಿರ್ದೇಶನದಂತೆ ಹಿಂದೆ ಪ್ರಜಾಸೌಧಕ್ಕೆ ಕಾಯ್ದಿರಿಸಲಾಗಿದ್ದ ಸರ್ವೇ ನಂ.146/*/*ರಲ್ಲಿನ 3.39 ಎಕರೆ ಭೂಮಿಯನ್ನು ತಾಲೂಕು ಕ್ರೀಡಾಂಗಣಕ್ಕೆ ಹಸ್ತಾಂತರಿಸಲು ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದೇಶವಾಗಬೇಕಿದೆ. | ವಿಶ್ವನಾಥ ಮುರುಡಿ ತಹಸೀಲ್ದಾರ್, ಕನಕಗಿರಿ