

ಕನಕಗಿರಿ: ಮಣ್ಣಿನ ಫಲವತ್ತತೆ ನೋಡಿಕೊಂಡು ಬೆಳೆ ಬೆಳೆಯುವಂತಾದರೆ ರೈತನಿಗೆ ನಷ್ಟವಾಗುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರಟಗಿ ತಾಲೂಕು ಯೋಜನಾಧಿಕಾರಿ ನಿಂಗಪ್ಪ ಅಗಸರ ಹೇಳಿದರು.
ತಾಲೂಕಿನ ಮುಸಲಾಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ವಾಣಿಜ್ಯ ನರ್ಸರಿ ಹಾಗೂ ತೋಟಗಾರಿಕೆ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಕನಕಗಿರಿ ಹಾಗೂ ಮುಸಲಾಪುರ ಭಾಗದಲ್ಲಿ ಕೆಂಪು ಹಾಗೂ ಮರಳು ಮಿಶ್ರಿತ ಮಣ್ಣಿದ್ದು, ತೋಟಗಾರಿಕೆ ಬೆಳೆಗೆ ಸೂಕ್ತವಾಗಿದೆ. ಹೀಗಾಗಿಯೇ ಇಲ್ಲಿ ಹಲಸು, ಸಪೋಟ, ನಿಂಬೆ, ನೇರಳೆ, ಹುಣಸೆ, ಹೂವಿನ ಕೃಷಿ ಹೆಚ್ಚಾಗಿದೆ. ರೈತರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ತರಬೇತಿ, ಕೃಷಿ ಪ್ರವಾಸದಲ್ಲಿ ಭಾಗವಹಿಸಿ ಅನುಕೂಲ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾದರಿ ಕೃಷಿಕ ಶ್ರೀಧರ ಮಾತನಾಡಿ, ನಾನು ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದು, ಉಳಿದ ರೈತರು ಸಹ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಭಾರತದ ಕೃಷಿ ಕ್ಷೇತ್ರ ಅತ್ಯುತ್ತಮವಾಗಲಿದೆ ಎಂದರು.
ತಾಲೂಕು ಕೃಷಿ ಅಧಿಕಾರಿ ಗಂಗಾಧರ, ಮೇಲ್ವಿಚಾರಕ ಯಲ್ಲಾರಿ ಶಿವಾಜಿ, ಮಾದರಿ ರೈತ ಗಂಗಾಧರಯ್ಯಸ್ವಾಮಿ ಮುಸಲಾಪುರ, ಸೇವಾ ಪ್ರತಿನಿಧಿಗಳಾದ ಶಿವಕುಮಾರ, ಸರಸ್ವತಿ, ಚನ್ನಬಸಪ್ಪ ಹಾಗೂ ರೈತರಿದ್ದರು.