

ಕನಕಗಿರಿ: ಸರಳತೆ, ಪ್ರಾಮಾಣಿಕತೆ ಹಾಗೂ ಮೇಧಾವಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂರವರು ರಾಷ್ಟ್ರಪತಿಯಾಗಿ ಆಡಳಿತ ನಡೆಸುವ ಮೂಲಕ ಆ ಸ್ಥಾನದ ಘನತೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು ಎಂದು ದೈಹಿಕ ಶಿಕ್ಷಕ ಶಾಮೀದಸಾಬ ಲೈನ್ದಾರ ಹೇಳಿದರು.
ಪಟ್ಟಣದ 7ನೇ ವಾರ್ಡಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಜನ್ಮ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಣು ವಿಜ್ಞಾನಿ ಕಲಾಂಗೆ ಚಿಕ್ಕಮಕ್ಕಳೆಂದರೆ ಬಲು ಪ್ರೀತಿ. ಹೀಗಾಗಿ ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ನೀಡುವುದನ್ನು ರೂಢಿಸಿಕೊಂಡಿದ್ದರು. ಇಂತಹ ಸರಳಜೀವಿಗೆ ಭಾರತ ಸರ್ಕಾರ ಪದ್ಮಭೂಷಣ, ಭಾರತರತ್ನ, ಪದ್ಮ ವಿಭೂಷಣ ಇತರ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.
ಮುಸ್ಲಿಂ ಸಮಾಜದ ಗುರುಗಳಿಗೆ, ಸಮಾಜ ಸೇವಕರಿಗೆ ಹಾಗೂ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಚಾಂದಪಾಷಾ, ಪಾಷಾಸಾಬ ಮಕಂದಾರ, ಶಾಮೀದ್‌ಸಾಬ್ ಬೀಡಿ, ಪೀರ್ ಅಹ್ಮದ್ ಬೀಡಿ, ಬಾಷಾಸಾಬ ಸಿಕ್ಲಗಾರ, ಸೈಯದ್ ಖಾಜಾಹುಸೇನ ಇತರರಿದ್ದರು.