

ಕನಕಗಿರಿ: ಶ್ರೀ ವೀರಭದ್ರೇಶ್ವರ ಜಯಂತಿ ನಿಮಿತ್ತ ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಹಾಗೂ ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯ ಮಂಗಳವಾರ ನಡೆಯಿತು.
ನವಲಿಯಲ್ಲಿ ವಿಶೇಷ ಪೂಜೆ ನಡೆಸಿದ ನಂತರ ಶಿವಯ್ಯಸ್ವಾಮಿ ಹಿರೇಮಠ ಮಾತನಾಡಿ, ರಾಮನ ಬಂಟ ಹನುಮನಿಗೆ ವೀರಭದ್ರಸ್ವಾಮಿ ಲಿಂಗದೀಕ್ಷೆ ನೀಡಿದ್ದಾರೆ. ವೀರಭದ್ರ ದೇವರನ್ನು ಕಾಲ ಭೈರವ, ಈರಣ್ಣ, ಸುಗೂರೇಶ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುತ್ತಾರೆ. ಎಲ್ಲ ಸಮುದಾಯದವರು ವೀರಭದ್ರಸ್ವಾಮಿ ಆರಾಧಿಸುತ್ತಾರೆ. ನವಲಿ ಹಾಗೂ ಕನಕಗಿರಿಯಲ್ಲಿ ಐತಿಹಾಸಿಕ ದೇವಸ್ಥಾನಗಳಿದ್ದು, ಇಲ್ಲಿಗೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಧೈರ್ಯ, ಶಕ್ತಿಗಳಿಗೆ ಪ್ರತೀಕವಾಗಿರುವ ವೀರಭದ್ರ ಸ್ವಾಮಿಯ ಐತಿಹ್ಯ ಭಕ್ತ ಸಮೂಹಕ್ಕೆ ಸ್ಫೂರ್ತಿಯಾಗಿವೆ ಎಂದು ತಿಳಿಸಿದರು.
ಶ್ರೀಸ್ವಾಮಿಗೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಶತನಾಮಾವಳಿ, ಬಿಲ್ವಾರ್ಚನೆ, ನೈವೈದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು. ಗ್ರಾಪಂ ಸದಸ್ಯ ಈಶ್ವರಯ್ಯಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪೂರ, ದೇವಸ್ಥಾನದ ಅರ್ಚಕ ಜಡಿಸಿದ್ದಯ್ಯಸ್ವಾಮಿ, ವೀರೇಶಸ್ವಾಮಿ, ವೀರ ಗಂಗಾಧರಯ್ಯಸ್ವಾಮಿ ಇತರರಿದ್ದರು.
ಕನಕಗಿರಿಯಲ್ಲೂ ಆಚರಣೆ: ಪಟ್ಟಣದಲ್ಲಿ ಸರ್ವಜ್ಞ ಸೇವಾ ಸಮಿತಿ ಹಾಗೂ ಕುಂಬಾರ ಸಂಘದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಪಂಪಯ್ಯಸ್ವಾಮಿ, ಮೃತ್ಯಂಜಯ್ಯಸ್ವಾಮಿ, ಗಂಗಾಧರಸ್ವಾಮಿ ಕಲುಬಾಗಿಲಮಠ, ಹಿರಿಯರಾದ ವೀರಭದ್ರಗೌಡ ಮಾಲಿ ಪಾಟೀಲ್, ಪಶುಪತಿ ಪಾಟೀಲ್, ಸಂಗಪ್ಪ ಸಜ್ಜನ, ಮಹಬಳೇಶ ಸಜ್ಜನ, ಶೇಖರಗೌಡ ಪಾಟೀಲ್, ಗುರುಸಿದ್ದಪ್ಪ ಹಾದಿಮನಿ, ಬಸವರಾಜ ಸಜ್ಜನ, ಮಹಾಂತೇಶ ತಾಡಪತ್ರಿ, ಮಲ್ಲೇಶಪ್ಪ ಸೇರಿದಂತೆ ಸಾವಿರಾರು ಭಕ್ತರು ಇದ್ದರು.