

ಕನಕಗಿರಿ: ಕಡಿಮೆ ಅವಧಿ ಬದುಕಿದರೂ ಹೆಚ್ಚು ಕಾಲ ನೆನಪು ಉಳಿಯುವಂಥ ಕೊಡುಗೆಯನ್ನು ಷೇಕ್ಸ್‌ಪಿಯರ್ ಅವರು ಆಂಗ್ಲ ಸಾಹಿತ್ಯ ಹಾಗೂ ರಂಗಭೂಮಿಗೆ ನೀಡಿದ್ದಾರೆ ಎಂದು ಗವಿಸಿದ್ಧೇಶ್ವರ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಎ. ಜಿ. ಅರುಣಕುಮಾರ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಷೇಕ್ಸ್‌ಪಿಯರ್ ಅವರ 462ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಷೇಕ್ಸ್‌ಪಿಯರ್ ಬದುಕಿದ್ದು 52 ವರ್ಷಗಳಾದರೂ ಅಷ್ಟರಲ್ಲೇ 39 ನಾಟಕಗಳನ್ನು ರಚಿಸಿದರು. ಆ ನಾಟಕಗಳಲ್ಲಿ ಒಂದು ಸಾಲನ್ನೂ ತೆಗೆದು ಹಾಕಲು ಸಾಧ್ಯವಾಗದ ಹಾಗೇ ನಾಟಕಗಳನ್ನು ರಚಿಸಿದ್ದಾರೆ. ಷೇಕ್ಸ್‌ಪಿಯರ್ ನಾಟಕಗಳನ್ನು ರಚಿಸುವುದರ ಜತೆಗೆ ನಾಟಕಗಳಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಿದ್ದರು.
19- 20ನೇ ಶತಮಾನದ ಅಂತ್ಯ ಹಾಗೂ ಆದಿಗಳು ಅನುವಾದದ ಯುಗವಾಗಿತ್ತು. ಅಂದಿನ ಕಾಲ ಘಟ್ಟದಲ್ಲಿ ನಾಟಕ- ಕಥೆ, ಕಾದಂಬರಿಗಳ ಅನುವಾದ ಆರಂಭವಾಯಿತು. ಕನ್ನಡ ರಂಗಭೂಮಿಯಲ್ಲಿದ್ದ ಬಹಳಷ್ಟು ಮಂದಿ ಅನುವಾದಕರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಷೇಕ್ಸ್‌ಪಿಯರ್ ಅವರನ್ನು ತಂದರು. ಅವರು ಪಟ್ಟ ಪ್ರಯತ್ನವೇ ಇಂದಿನ ಸ್ಮರಣೆಗೆ ಸಾಕ್ಷಿ ಎಂದರು.
ಆಂಗ್ಲ ಭಾಷೆ ಸಹಾಯಕ ಪ್ರಾಧ್ಯಾಪಕ ಎ. ರಕ್ಷಿತ್ ಮಾತನಾಡಿ, ಜಗತ್ತಿನ ನಾಟಕಕಾರರ ಪೈಕಿ ಕನ್ನಡ ಲೇಖಕರನ್ನು ಪ್ರಬಲವಾಗಿ ಸೆಳೆದವರಲ್ಲಿ ಷೇಕ್ಸ್‌ಪಿಯರ್ ಪ್ರಮುಖರು. ಅವರ ನಾಟಕಗಳು ಕನ್ನಡಕ್ಕೆ ಅನುವಾದ, ರೂಪಾಂತರಗೊಂಡ ನಂತರವೇ ನಾಟಕ ಪ್ರಿಯರು ಹೆಚ್ಚಾದರು ಎಂದರು.
ಕಾಲೇಜು ಪ್ರಾಚಾರ್ಯ ಬಜರಂಗ ಬಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆಂಗ್ಲ ಭಾಷಾ ವಿಭಾಗದ ವಿದ್ಯಾರ್ಥಿಗಳು ಷೇಕ್ಸ್‌ಪಿಯರ್ ಕಿರು ನಾಟಕಗಳನ್ನು ಪ್ರದರ್ಶಿಸಿದರು. ಕಾಲೇಜು ಪ್ರಾಧ್ಯಾಪಕರಾದ ಡಾ. ಆಶೀಕಾ ಎಚ್.ಸಿ, ಮರ್ವಿನ್ ಡಿಸೋಜ, ಲಲಿತಾ ಎನ್. ಕೆ., ಡಾ. ವೀರೇಶ ಕೆ. ಇತರರಿದ್ದರು.