ಜಿಲ್ಲಾಮಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸಲಿ

Untitled design (4)
Published on

ಕನಕಗಿರಿ: ತಾಲೂಕು ಕಚೇರಿಗಳನ್ನು ಆರಂಭಿಸುವಂತೆ ಎಸ್‌ಎಫ್‌ಐನಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಶುಕ್ರವಾರಕ್ಕೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಹೋರಟಗಾರರು ವಾಲ್ಮೀಕಿ ವೃತ್ತದಲ್ಲಿ ಕೆಲ ಕಾಲ ಸಂಚಾರ ತಡೆದು ಪ್ರತಿಭಟಿಸಿದರು.

ಗುರುವಾರದಿಂದ ಧರಣಿ ಆರಂಭಿಸಿದರೂ ಸಹ ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದಿಲ್ಲ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಡಿಡಿಪಿಐ ಆಗಮಿಸಬೇಕು. ಪಟ್ಟಣದಲ್ಲಿ ತಾಲೂಕು ಮಟ್ಟದ ಕಚೇರಿ ಆರಂಭಿಸುವವರೆಗೆ ಧರಣಿ ನಡೆಸುವುದಾಗಿ ಎಸ್‌ಎಫ್‌ಐ ಸಂಘಟನೆಯ ಪದಾಧಿಕಾರಿಗಳು ಎಚ್ಚರಿಸಿದರು.

ನೂರಾರು ವಿದ್ಯಾರ್ಥಿಗಳೊಂದಿಗೆ ನಡೆಯುತ್ತಿದ್ದ ಧರಣಿಯನ್ನು ವಾಲ್ಮೀಕಿ ವೃತ್ತಕ್ಕೆ ಸ್ಥಳಾಂತರಿಸಿದ ಸಂಘಟನೆಯ ಪದಾಧಿಕಾರಿಗಳು ಕೆಲಕಾಲ ಸಂಚಾರ ತಡೆದರು. ಪೊಲೀಸರ ಮಾತಿಗೂ ಜಗ್ಗದೇ ಜಿಲ್ಲಾಮಟ್ಟದ ಅಧಿಕಾರಿಗಳು ಬಂದು ಬೇಡಿಕೆ ಈಡೇರಿಸಲಿ ಎಂದು ಒತ್ತಾಯಿಸಿದರು. ಪೊಲೀಸರು ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆಯಿತು. ನಂತರ ಶಿರಸ್ತೇದಾರ್ ಅನಿತಾ ಇಂಡಿ, ಸಚಿವ ಶಿವರಾಜ ತಂಗಡಗಿಯ ಆಪ್ತ ಸಹಾಯಕ ವೆಂಕಟೇಶಗೆ ಮನವಿ ಸಲ್ಲಿಸಲಾಯಿತು.

ಶಿರಸ್ತೇದಾರ ಅನಿತಾ ಇಂಡಿ, ಸೋಮವಾರ ಎಲ್ಲ ತಾಲೂಕು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಲಾಗುವುದೆಂದು ಭರವಸೆ ನೀಡಿದರು. ಪ್ರತಿಭಟನಾಕಾರರು ಧರಣಿ ಹಿಂಪಡೆದರು. ತಾಲೂಕು ಕೇಂದ್ರವಾಗಿ ಪಟ್ಟಣವು ಎಂಟು ವರ್ಷ ಕಳೆದಿದ್ದು, ಕ್ಷೇತ್ರದ ಶಾಸಕರೇ ಸಚಿವರಾಗಿದ್ದಾರೆ. ಆದರೆ, ತಾಲೂಕು ಮಟ್ಟದ ಕಚೇರಿಗಳನ್ನು ಪಟ್ಟಣದಲ್ಲಿ ಆರಂಭಿಸಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿ ಇತರೇ ಕಚೇರಿಗಳನ್ನು ಪಟ್ಟಣದಲ್ಲಿ ಆರಂಭಿಸಬೇಕು. ಶಾಲೆಗಳಿಗೆ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ತಹಸಿಲ್ ಕಚೇರಿ ಮುಂದೆ ಧರಣಿ ಆರಂಭಿಸಿದ್ದರು. ರಾಜ್ಯಾಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ಬಸವರಾಜ ಗುಳದಾಳ, ಜಿಲ್ಲಾ ಕಾರ್ಯದರ್ಶಿ ಶಿವು ಈಚನಾಳ, ತಾಲೂಕು ಅಧ್ಯಕ್ಷ ಹನುಮೇಶ ಮ್ಯಾಗಡೆ, ಬಾಲಾಜಿ ಚಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net