ಶಾಲಾ-ಕಾಲೇಜು ಸಮಯಕ್ಕೆ ಬಸ್ ಬಿಡಿ: ನಾಗಲಾಪುರದಲ್ಲಿ ವಿದ್ಯಾರ್ಥಿಗಳು, ಪಾಲಕರು, ರೈತ ಸಂಘ ಪ್ರತಿಭಟನೆ

220922 Kanakagiri nagalapura Students Protest
ಕನಕಗಿರಿ ಬಸ್ ನಿಲ್ದಾಣ ಸಂಚಾರ ನಿಯಂತ್ರಕ ಶ್ರೀರಾಮ್ ನಾಯಕಗೆ ನಾಗಲಾಪುರದಲ್ಲಿ ವಿದ್ಯಾರ್ಥಿಗಳು, ಪಾಲಕರು ಮನವಿ ಸಲ್ಲಿಸಿದರು.
Published on

ಕನಕಗಿರಿ: ಶಾಲಾ, ಕಾಲೇಜು ಸಮಯಕ್ಕೆ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ನಾಗಲಾಪುರದಲ್ಲಿ ವಿದ್ಯಾರ್ಥಿಗಳು, ಪಾಲಕರು ಹಾಗೂ ರೈತ ಸಂಘದ ಪದಾಧಿಕಾರಿಗಳು ಗುರುವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.

ನಾಗಲಾಪುರದಿಂದ ಹಲವು ವಿದ್ಯಾರ್ಥಿಗಳು ಶಾಲಾ ಕಾಲೇಜಿಗಾಗಿ ಕನಕಗಿರಿ, ಕೊಪ್ಪಳಕ್ಕೆ ತೆರಳುತ್ತಾರೆ. ಆದರೆ, ಕೊಪ್ಪಳದಿಂದ ಕನಕಗಿರಿಗೆ ಸಂಚರಿಸುವ ಬಸ್‌ಗಳು ಶಾಲಾ-ಕಾಲೇಜು ಸಮಯಕ್ಕೆ ಇಲ್ಲವಾದ್ದರಿಂದ ತೊಂದರೆಯಾಗುತ್ತಿದೆ. ಇದೇ ಅವಧಿಯಲ್ಲಿ ಕೆಲ ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರಿಂದ ತುಂಬಿರುವ ಕಾರಣ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುತ್ತಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳು ಸಕಾಲಕ್ಕೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಎರಡ್ಮೂರು ಸಲ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಹೆಚ್ಚುವರಿ ಬಸ್ ಓಡಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ ಕನಕಗಿರಿ ಬಸ್ ನಿಲ್ದಾಣ ಸಂಚಾರ ನಿಯಂತ್ರಕ ಶ್ರೀರಾಮ್ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಹನುಮೇಶ ಪೂಜಾರಿ, ಸೋಮಪ್ಪ ಮ್ಯಾದ್ನೇರಿ, ವಿದ್ಯಾರ್ಥಿಗಳಾದ ಅಕ್ಷತಾ, ಮಂಜುಳಾ, ಯಮನೂರಿ, ದುರುಗೇಶ, ನಾಗರಾಜ, ಮಂಜುನಾಥ, ಶಂಕರಗೌಡ, ಸೋಮನಾಥ, ಕರಿಯಪ್ಪ, ಭಗವಾನ್, ಶೇಖರಪ್ಪ, ಕೃಷ್ಣ, ಹನುಮಂತಿ, ಅನಿತಾ, ಭಾಗ್ಯ, ಭುವನೇಶ್ವರಿ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net