

ಕನಕಗಿರಿ: ಶಿಥಿಲಾವಸ್ಥೆಯಲ್ಲಿರುವ ರಾಮದುರ್ಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ದುರಸ್ಥಿಗೊಳಿಸಬೇಕು ಹಾಗೂ ಶಾಲೆಗೆ ಮೂಲ ಸೌಲಭ್ಯ ಒದಗಿಸಲು ಆಗ್ರಹಿಸಿ ಎನ್‌ಎಸ್‌ಯುಐ ತಾಲೂಕು ಘಟಕದಿಂದ ಭಾನುವಾರ ಸಚಿವ ಶಿವರಾಜ ತಂಗಡಗಿಗೆ ಕಾರಟಗಿಯ ನಿವಾಸದಲ್ಲಿ ಮನವಿ ಸಲ್ಲಿಸಲಾಯಿತು.
ಕನಕಗಿರಿ ಕ್ಷೇತ್ರದ ಕಟ್ಟೆ ಕಡೆಯ ಗ್ರಾಮವಾಗಿರುವ ರಾಮದುರ್ಗಾ ಶಾಲೆಯನ್ನು ಕಳೆದ ವರ್ಷ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ.
ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಮೇಲ್ಛಾವಣಿಗಳಿಗೆ ಬಳಸಲಾದ ಕಬ್ಬಿಣದ ಕಂಬಿ ತುಣುಕುಗಳು, ಕಾಂಕ್ರಿಟ್ ಬೀಳುತ್ತಿರುವುದರಿಂದ ಗ್ರಾಮದ ಮಲಿಯಮ್ಮ ದೇವಸ್ಥಾನ, ಸರ್ಕಾರಿ ಗೋದಾಮಿನಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲವಾಗಿದ್ದು, ಅತಿಥಿ ಶಿಕ್ಷಕರಿಂದಲೇ ಶಾಲೆ ನಡೆಯುತ್ತಿದೆ. ದಾಖಲಾತಿಗಳನ್ನು ನೀಡುವುದಕ್ಕಾಗಿ ಪಕ್ಕದ ಚಿಕ್ಕಮಾದಿನಾಳ ಶಾಲೆಯ ಶಿಕ್ಷಕರೊಬ್ಬರನ್ನು ನೇಮಿಸಲಾಗಿದೆ.
ಶಾಲಾ ಮಕ್ಕಳಿಗಾಗಿ ಶೌಚಗೃಹ, ಆಟದ ಮೈದಾನದ ಕೊರತೆ, ಕೊಠಡಿಗಳ ಕೊರತೆಯಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಶಾಲೆಯ ಕೊಠಡಿಗಳ ದುರಸ್ಥಿ ಹಾಗೂ ಮೂಲಸೌಲಭ್ಯ ಒದಗಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮುಂದಾಗಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಗ್ರಾಮದ ಯುವಕರಾದ ಮಹಾಂತೇಶ ಬಳ್ಳಾರಿ, ಸೋಮರಾಜ, ಆಂಜನೇಯ ಭೀಮನೂರು, ಮಲ್ಲಯ್ಯ ಸಂಗಟಿ, ಪರಶುರಾಮ ಇತರರಿದ್ದರು.