

ಕನಕಗಿರಿ: ಅಕ್ಷರದ ಮೂಲಕ ಸಮಾಜ ತಿದ್ದಿದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಎಂದು ಸಾಹಿತಿ ಅಲ್ಲಾಗಿರಿರಾಜ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆಯಲ್ಲಿ ಶುಕ್ರವಾರ ಮಾತನಾಡಿದರು. ದೇಶದಲ್ಲಿನ ಮಹಿಳೆಯರ ಶಿಕ್ಷಣಕ್ಕಾಗಿ ದಿಟ್ಟ ಹೋರಾಟ ನಡೆಸಿದ ಫುಲೆ ಅವರನ್ನು ಜನ್ಮದಿನದಂದು ಮಾತ್ರ ಸ್ಮರಿಸಿ ಮರೆಯುವುದು ಬೇಸರದ ಸಂಗತಿ. ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಮುನ್ನೆಲೆಗೆ ಬರಲು ಫುಲೆ ಅವರೇ ಕಾರಣ. ಒಬ್ಬ ವಿಜ್ಞಾನಿಯಂತೆ ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಧಾರ್ಮಿಕ ಚೌಕ್ಕಟ್ಟುಗಳಿಗೆ ಬಂಧಿಯಾಗಿದ್ದ ಮಹಿಳೆಯರ ಶಿಕ್ಷಣಕ್ಕಾಗಿ ಅನೇಕ ಅಪಮಾನ, ನೋವುಗಳನ್ನು ಎದುರಿಸಿ ಸಾಮಾಜಿಕ, ಶೈಕ್ಷಣಿಕ ಸುಧಾರಣೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಪೂರಕವಾಗಿವೆ. ಮಕ್ಕಳಿಗೆ ಅವರ ವಿಚಾರಗಳನ್ನು ತಿಳಿಸಬೇಕು. ಅವರ ಆದರ್ಶ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ತಾಲೂಕು ನೌಕರರ ಸಂಘದ ಅಧ್ಯಕ್ಷೆ ಶಂಶಾದ್ ಬೇಗಂ, ಪ್ರಮುಖರಾದ ಪಾಮಣ್ಣ ಅರಳಿಗನೂರು, ಕನಕಪ್ಪ ಮ್ಯಾಗಡೆ, ಮಕ್ತುಂಸಾಬ ಚಳ್ಳಮರದ, ನಾಗೇಶ ಬಡಿಗೇರ, ನೀಲಕಂಠ ಬಡಿಗೇರ ಇತರರಿದ್ದರು.