ವಿರೂಪಾಕ್ಷರೆಡ್ಡಿ ಸಾಧನೆ ಅವಿಸ್ಮರಣೀಯ

SANMANA
ಕನಕಗಿರಿಯ ಹೇಮ-ವೇಮ ರೆಡ್ಡಿ ಚಾರಿಟಬಲ್ ಟ್ರಸ್ಟ್‌ನಿಂದ ಸಾಧಕರಾದ ಈರಪ್ಪ ಹಾದಿಮನಿ, ವಿರೂಪಾಕ್ಷರೆಡ್ಡಿ ಓಣಿಮನಿ ಹಾಗೂ ಹುಸೇನದಾಸರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಬಿ.ವಿ ಜೋಶಿ, ಪಶುಪತಿ ಪಾಟೀಲ್, ಕೀರ್ತಿ ಸೋನಿ, ಅಶೋಕ ಸಜ್ಜನ, ಪ್ರಕಾಶ ಹಾದಿಮನಿ ಇತರರಿದ್ದರು.
Published on

ಕನಕಗಿರಿ: ಜಿಲ್ಲೆ ಸೇರಿದಂತೆ ಆಂಧ್ರದಲ್ಲೂ ದಾಸಸಾಹಿತ್ಯ ಬೆಳೆಸಿದ ಕೀರ್ತಿ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷರೆಡ್ಡಿಗೆ ಸಲ್ಲುತ್ತದೆ ಎಂದು ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಹುಸೇನದಾಸ ಹೇಳಿದರು.

ಪಟ್ಟಣದ ಬಸವಶ್ರೀ ಇಂಡೇನ್ ಗ್ರಾಮೀಣ ವಿತರಕದಲ್ಲಿ ಮುಖ್ಯಮಂತ್ರಿ ಪದಕ ಪಡೆದ ಈರಪ್ಪ ಹಾದಿಮನಿ, ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾದ ವಿರೂಪಾಕ್ಷರೆಡ್ಡಿ ಓಣಿಮನಿ ಹಾಗೂ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಹುಸೇನದಾಸ ಅವರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶ್ರಮವಿಲ್ಲದೆ, ಸೇವೆಗೈಯದೆ ತಾನು ಸಾಧಕನೆಂದು ಪ್ರಭಾವ ಬಳಸಿ ಹೊಟ್ಟೆ ತುಂಬಿಸಿಕೊಳ್ಳುವ ದಿನಮಾನಗಳಲ್ಲಿ ಹಾರ ತುರಾಯಿಗಳ ಆಸೆಯಿಲ್ಲದೆ 50 ವರ್ಷಕ್ಕೂ ಹೆಚ್ಚು ಕಾಲ ಹಾರ್ಮೋನಿಯಂ, ಸಂಗೀತ ಸೇವೆ ಮಾಡಿರುವ ವಿರೂಪಾಕ್ಷರೆಡ್ಡಿ ಸಾಧನೆ ಅವಿಸ್ಮರಣೀಯ. ಪ್ರಸ್ತುತ ದಿನಮಾನಗಳಲ್ಲಿ ಇಂಥ ಪ್ರಾಮಾಣಿಕ ಮತ್ತು ಭಕ್ತಿಮಾರ್ಗದಲ್ಲಿ ಸಾಧನೆ ಮಾಡಿರುವ ಅಪರೂಪ ಕಲಾವಿದ ಎಂದರು.

ಹೇಮ-ವೇಮ ಟ್ರಸ್ಟ್ ಅಧ್ಯಕ್ಷ ಪುರುಷೋತ್ತಮರೆಡ್ಡಿ ಮಾದಿನಾಳ ಮಾತನಾಡಿ, ತಲತಲಾಂತರದಿಂದ ಬಂದ ಒಕ್ಕಲುತನ ಜತೆಗೆ ಸಂಗೀತ ಕ್ಷೇತ್ರದಲ್ಲಿ ಕೃಷಿ ಮಾಡಿರುವ ವಿರೂಪಾಕ್ಷರೆಡ್ಡಿ ಅವರು ಬಾಲ್ಯದಲ್ಲಿಯೇ ಭಜನೆ ಮೂಲಕ ದಾಸ, ಶರಣ ಸಾಹಿತ್ಯವನ್ನು ಜನರಿಗೆ ತಲುಪಿಸಿದ್ದಾರೆ. ಭಜನಾ ಸಂಘಗಳನ್ನು ಹುಟ್ಟು ಹಾಕಿ ದಾಸ ಸಾಹಿತ್ಯ ಉಳಿಸುವ ಕಾರ್ಯ ಶ್ಲಾಘನೀಯ. ಅರಣ್ಯ ಇಲಾಖೆಯಲ್ಲಿ ಸಾವಿರಾರು ಗಿಡ ಮರಗಳನ್ನು ಬೆಳೆಸಿರುವ ಈರಪ್ಪ ಹಾದಿಮನಿಯಿಂದ ನಮ್ಮ ಭಾಗದಲ್ಲಿ ಇನ್ನು ಹಸಿರು ಕಾಣುವಂತಾಗಿದೆ ಎಂದರು.

ಪ್ರಮುಖರಾದ ಯಂಕಾರೆಡ್ಡಿ ಕೆರಿ, ನಾರಾಯಣರೆಡ್ಡಿ, ಚಂದ್ರಹಾಸರೆಡ್ಡಿ ಅಳ್ಳಳ್ಳಿ, ಭೀಮರೆಡ್ಡಿ ಓಣಿಮನಿ, ರಾಜಶೇಖರರೆಡ್ಡಿ, ಪಂಪಾರೆಡ್ಡಿ ಗಚ್ಚಿನಮನಿ, ಮಂಜುನಾಥ ಕೋರಡ್ಡಿ, ರಂಗಾರೆಡ್ಡಿ ಬೊರೆಡ್ಡಿ, ಪಂಪಾರೆಡ್ಡಿ ಮಾದಿನಾಳ, ಶಿವರೆಡ್ಡಿ ಮಣ್ಣೂರು, ಹನುಮಂತರೆಡ್ಡಿ ಮಹಲಿನಮನಿ, ಬಿ.ವಿ ಜೋಶಿ, ಪಶುಪತಿ ಪಾಟೀಲ್, ಕೀರ್ತಿ ಸೋನಿ, ಅಶೋಕ ಸಜ್ಜನ, ಪ್ರಕಾಶ ಹಾದಿಮನಿ, ಮಂಜುನಾಥರೆಡ್ಡಿ ಮಾದಿನಾಳ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net