

ಕನಕಗಿರಿ: ಕನಕಗಿರಿಯ ಹಲವರಿಗೆ ವಿಧಾನಸೌಧ ಮೆಟ್ಟಿಲೇರಲು ಅವಕಾಶವಿದ್ದರೂ ನಾನಾ ತಡೆಗಳಿಂದ ವಂಚಿತರಾಗಿತ್ತಿರುವುದು ಬೇಸರದ ಸಂಗತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಸಿ.ಬಿ.ಚಿಲ್ಕರಾಗಿ ಹೇಳಿದರು.
ಇಲ್ಲಿನ ಶ್ರೀ ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ಅವರ ಕುರಿತಾದ ‘ಸಜ್ಜನಿಕೆಯ ಶಿಖರ’ ಅಭಿನಂದನಾ ಗ್ರಂಥ ಬಿಡುಗಡೆಯಲ್ಲಿ ಮಾತನಾಡಿದರು.
ಕನಕಗಿರಿ ರಾಜಕೀಯ, ಧಾರ್ಮಿಕ, ಪ್ರವಾಸಿ ತಾಣವಾಗಿ ತನ್ನದೇ ಛಾಪು ಮೂಡಿಸಿದೆ. ಆದರೆ, ಇಲ್ಲಿನವರು ಮಾತ್ರ ವಿಧಾನಸೌಧದ ಮೆಟ್ಟಿಲೇರಲಾಗಲಿಲ್ಲ. ಸ್ಥಳೀಯರಾದ ಮಹಾಬಳೇಶ್ವರ ಸ್ವಾಮಿ, ದುರ್ಗಾದಾಸ್ ಯಾದವ್, ರಾಮಚಂದ್ರಪ್ಪ ಬೊಂದಾಡೆ, ರುದ್ರಪ್ಪ ದೇವರೆಡ್ಡಿ ಹಲವರು ಶಾಸಕರಾಗಬಹುದಿತ್ತು. ಆದರೆ, ವಲಸೆ ಬಂದವರೇ ಕ್ಷೇತ್ರದ ಶಾಸಕರಾಗಿ ಉನ್ನತ ಅಧಿಕಾರವನ್ನು ಅನುಭವಿಸಿದ್ದಾರೆ. ಈ ನಡುವೆ ಶೇಖರಗೌಡರು ಸಹಕಾರಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಸಂಸ್ಥೆಯೊಂದರ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿರುವುದು ಒಂದಿಷ್ಟು ಖುಷಿ ವಿಚಾರವಾಗಿದೆ ಎಂದರು.
ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲಸ್ವಾಮೀಜಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು. ರಾಜರಾಜೇಶ್ವರಿ ಬ್ರಹನ್ಮಠದ ಭುವನೇಶ್ವರಯ್ಯತಾತ, ಅರಳಹಳ್ಳಿಯ ಗವಿಸಿದ್ದಯ್ಯತಾತ, ಗೊರೇಬಾಳದ ಮರುಳಸಿದೇಶ್ವರಮಠದ ಡಾ.ಸಿದ್ದಯ್ಯಸ್ವಾಮಿ, ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ಸುಲೋಚನಾ ಸಾನ್ನಿಧ್ಯವಹಿಸಿದ್ದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಸಾಹಿತಿಗಳಾದ ಎಸ್.ವ್ಹಿ ಪಾಟೀಲ್ ಗುಂಡೂರು, ಅಲ್ಲಾಗಿರಿರಾಜ, ದುರ್ಗಾದಾಸ ಯಾದವ, ಮನೋಹರ ಬೊಂದಾಡೆ, ಶರಣಪ್ಪ, ಸಿ.ಜೆ ಹಂಪಣ್ಣ, ಗುರುಸಿದ್ದಪ್ಪ ಹಾದಿಮನಿ, ಮಹಾಬಳೇಶ ಸಜ್ಜನ ಇತರರು ಇದ್ದರು.