

ಕನಕಗಿರಿ: ಅಸ್ಪಶ್ಯರು, ಶೂದ್ರರೆಂದು ವಂಚಿಸುವ ಕಾಲದಲ್ಲಿ 18 ಜಾತಿಗಳಿಗೆ ಮಠಗಳನ್ನು ಸ್ಥಾಪಿಸಿ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಮಾನತೆ ಸಾರಿದ ಕೀರ್ತಿ ರೇವಣಸಿದ್ದೇಶ್ವರರಿಗೆ ಸಲ್ಲುತ್ತದೆ ಎಂದು ತಿಂಥಿಣಿ ಬ್ರಿಡ್ಜ್ ಕನಕಗುರು ಪೀಠದ ಶ್ರೀ ಸಿದ್ಧರಾಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಎಪಿಎಂಸಿ ಶ್ರಮಿಕರ ಭವನದಲ್ಲಿ ಶ್ರಾವಣ ಮಾಸದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಜ್ಞ-ಯಾಗಾದಿಗಳು ಹಾಗೂ ಪೂಜೆ ಮೂಲಕ ಸ್ವರ್ಗಕ್ಕೆ ಕರೆದೊಯ್ಯುತ್ತೇವೆ ಎಂದು ಶೂದ್ರರನ್ನು ವಂಚಿಸಿದ್ದರಿಂದ ರೇವಣಸಿದ್ದೇಶ್ವರರು ಸಮುದಾಯಕ್ಕೊಂದು ಮಠ ಸ್ಥಾಪಿಸಿ, ನಿಮ್ಮ ಗುರುಗಳನ್ನು ಪೂಜಿಸಿ, ಮನೆತನದ ಸಂಸ್ಕೃತಿ ಉಳಿಸಿ ಎಂದಿದ್ದರು.
ಅವರಿಂದ ಪ್ರಭಾವಿತರಾಗಿ ಬಸವಣ್ಣನವರು ವಿವಿಧ ಕಾರ್ಯಗಳನ್ನು ಕೈಗೊಂಡರು. ನಮ್ಮವರ ಇತಿಹಾಸ ನಮಗೆ ಅರಿವಿಗೆ ಬಂದರೆ ನಡವಳಿಕೆಯೇ ಬದಲಾಗುತ್ತದೆ. ನಮ್ಮ ಇತಿಹಾಸ ಅರಿತು ಶಿಕ್ಷಣ, ಸಂಘಟನೆ ಬಗ್ಗೆ ಮಾತನಾಡುವುದಕ್ಕೂ ಹೆದರುತ್ತಾರೆ ಎಂದರು.
ದೇವರ ಪೂಜೆ, ಸತ್ಕಾರ್ಯಗಳಿಗೆ ಸಹಕಾರ ನೀಡಬೇಕು. ದಿನನಿತ್ಯ ಭಂಡಾರ ಹಚ್ಚಿಕೊಳ್ಳಬೇಕು. ಕುರಿಗಳೇ ದೇವರೆಂದು ಪೂಜಿಸುವ ನಾವುಗಳು ಕುರಿ ಬಲಿ ಕೊಡಬಾರದು. ಮದ್ಯಪಾನದಿಂದ ಜೀವನ ಹಾಳು ಮಾಡಿಕೊಳ್ಳಬಾರದು. ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ.
ರಾಜಕೀಯ ವಿಚಾರದಲ್ಲಿ ಬಿನ್ನಾಭಿಪ್ರಾಯ ಮಾಡದೇ ಸಮುದಾಯದವರನ್ನು ಆಯ್ಕೆ ಮಾಡಬೇಕು. ಪ್ರಕೃತಿಯಲ್ಲಿ ಗಿಡ-ಮರಗಳನ್ನು ನೆಟ್ಟು ಪೋಷಿಸಿ, ಅಂತರ್ಜಲ, ಉತ್ತಮ ವಾತಾವರಣ ನಿರ್ಮಿಸಬೇಕು ಎಂದು ತಿಳಿಸಿದರು.
ಹಾಲವರ್ತಿ-ಬಾದಿಮನಾಳ ಶಾಖಾಮಠದ ಶಿವ ಸಿದ್ದೇಶ್ವರ ಸ್ವಾಮೀಜಿ, ಲಿಂಗ ಬೀರದೇವರು, ಹಾಲುಮತ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಸಿದ್ದಪ್ಪ ನೀರಲೂಟಿ, ತಾಲೂಕು ಅಧ್ಯಕ್ಷ ನಾಗಪ್ಪ ಹುಗ್ಗಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ಪ ತೋಳದ, ಪ್ರಮುಖರಾದ ನಿರುಪಾದಿ, ಮಂಜುನಾಥ, ಸಂತೋಷ್ ನಾಗಲಾಪುರ, ಕನಕಪ್ಪ, ಹನುಮಂತ ಬಂಡ್ರಾಳ, ಗಂಗಾಧರ ಚೌಡ್ಕಿ ಇತರರಿದ್ದರು.