ರಾಜ್ಯೋತ್ಸವ ಅಚ್ಚುಕಟ್ಟಾಗಿ ಆಚರಿಸಿ

knk-1
ಕನ್ನಡ ರಾಜ್ಯೋತ್ಸವ ಆಚರಣೆ ನಿಮಿತ್ತ ಕನಕಗಿರಿ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಕನ್ನಡಪರ ಸಂಘಟನೆ ಶರಣಪ್ಪ ಸಜ್ಜನ್ ಮಾತನಾಡಿದರು. ಎಎಸ್‌ಐ ನಿಂಗಪ್ಪ ಹೂಗಾರ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರಿದ್ದರು.
Published on

ಕನಕಗಿರಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲು ತಹಸೀಲ್ದಾರ್ ಕ್ರಮವಹಿಸಬೇಕು ಎಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯೋತ್ಸವ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಿದರು.

ಪೂರ್ವಭಾವಿ ಸಭೆಗೂ ವಿವಿಧ ಇಲಾಖೆ ಅಧಿಕಾರಿಗಳು ಗೈರಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಕಳೆದ ವರ್ಷವೂ ಅಧಿಕಾರಿಗಳು ಸಭೆಗೆ ಗೈರಾಗುವ ಮೂಲಕ ತಾಯಿ ಭುವನೇಶ್ವರಿಗೆ ಅಗೌರವ ತೋರಿದ್ದಾರೆ.

ಇಂದಿನ ಸಭೆಗೂ ಗೈರಾಗಿರುವುದು ಅವರ ಅಸಡ್ಡೆತನ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ, ನ.1ರಂದು ನಡೆವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲು ಸೂಕ್ತ ಕ್ರಮ ವಹಿಸಬೇಕು ಎಂದು ತಹಸೀಲ್ದಾರ್‌ಗೆ ಒತ್ತಾಯಿಸಿದರು.

ನಂತರ ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ಗಂಗಾವತಿಯಲ್ಲಿ ಜಿಲ್ಲಾಧಿಕಾರಿ ಸಭೆ ಇರುವುದರಿಂದ ಅಧಿಕಾರಿಗಳು ಅಲ್ಲಿಗೆ ತೆರಳಿದ್ದಾರೆ. ಗೈರಾದವರಿಗೆ ನೋಟಿಸ್ ನೀಡಲಾಗುವುದು ಎಂದು ಸಮಜಾಯಿಷಿ ನೀಡಿ, ನಂತರ ಕಳೆದ ವರ್ಷ ದೀಪಾವಳಿಯಲ್ಲಿಯೇ ರಾಜ್ಯೋತ್ಸವ ಬಂದಿದ್ದರಿಂದ ಸರಳವಾಗಿ ಆಚರಿಸಲಾಗಿತ್ತು. ಪ್ರಸಕ್ತ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಿಳಿಸಿದರು.

ಸಂಘಟನೆಗಳ ಪದಾಧಿಕಾರಿಗಳ ಸಲಹೆ ಪಡೆದು, ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳ ಸಹಭಾಗಿತ್ವದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ಮಾಡಲಾಗುವುದು. ಕಲಾ ತಂಡಗಳನ್ನು ಒದಗಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗುವುದು.

ಮೆರವಣಿಗೆ ಬಳಿಕ ಊಟದ ವ್ಯವಸ್ಥೆ, ವಿದ್ಯಾರ್ಥಿಗಳು, ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ತಾಪಂ ಇಒ ರಾಜಶೇಖರ, ಶಿರಸ್ತೇದಾರ್ ಅನಿತಾ ಇಂಡಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಎಪಿಎಂಸಿ ಸಿಬ್ಬಂದಿ ಬಸವರಾಜ, ಪಪಂ ಸಿಬ್ಬಂದಿ ಆಂಜನೇಯ, ಇಸಿಒ ಆಂಜನೇಯ, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಾದ ಶರಣಪ್ಪ ಬಜಾರದ, ಶರಣಪ್ಪ ಸಜ್ಜನ್, ಮಲಕೇಶ ಕೋಟೆ, ಶ್ರೀಧರ, ಅರಣ್ಯ ಇಲಾಖೆಯ ದಾದಾಪೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net