

ಕನಕಗಿರಿ: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸದಿರಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪಟ್ಟಣದ ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಸೋಮವಾರ ಮನವಿ ಸಲ್ಲಿಸಿತು.
ಸಂಘಟನೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ ಭೋವಿ ಮಾತನಾಡಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಇದೀಗ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲು ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಕನಕಗಿರಿ, ಲಾಯದುಣಸಿ, ಗೌರಿಪುರ, ಹಿರೇಖೇಡ, ಕೆ.ಕಾಟಾಪೂರ, ರಾಂಪುರ ಸೇರಿ ನಾನಾ ಗ್ರಾಮಗಳಲ್ಲಿನ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಸರಬರಾಜು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿದ್ದರಿಂದ ಸುಮಾರು 30 ಟಿಎಂಸಿ ನೀರು ಪೋಲಾಗಿದೆ. ಆದರೆ, ಈ ನೀರು ಕೆರೆಗಳಿಗೆ ತುಂಬಿಸಿದ್ದರೆ ಒಣಭೂಮಿ ಪ್ರದೇಶದ ರೈತರು ಹಾಗೂ ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು. ಪ್ರತಿ ವರ್ಷವೂ ಜಲಾಶಯದ ನೀರು ಪೋಲಾಗುತ್ತದೆ. ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಬೇಕು. ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ತಾವೇ ತಂದಿರುವ ಯೋಜನೆಯ ಮೂಲಕ ಕೆರೆಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ ಮಾತನಾಡಿ, ಮಳೆಗಾಲದಲ್ಲಿಯೇ ಹಲವು ಗ್ರಾಮಗಳಲ್ಲಿ ನೀರಿನ ಅಭಾವವಾಗಿರುವುದು ಹಾಸ್ಯಾಸ್ಪದವಾಗಿದೆ. ಸಚಿವರು ರೈತರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ ಪ್ರತ್ಯೇಕ ಸಭೆಯನ್ನು ಆಯೋಜಿಸಬೇಕಿದೆ ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ, ಕನಕಗಿರಿ ತಾಲೂಕು ಘಟಕದ ಅಧ್ಯಕ್ಷ ಭೀಮನಗೌಡ, ರೈತ ಮುಖಂಡರಾದ ಶಿವಕುಮಾರ ಬಡಿಗೇರ, ಮರಿಸ್ವಾಮಿ, ಬಾಲಪ್ಪ ನಾಡಿಗೇರ, ವೆಂಕಟೇಶ್ ಮಲ್ಲಿಗೆವಾಡ, ಜಡಿಯಪ್ಪ ನಾಯಕ, ನರಸಪ್ಪ ಮಡಿವಾಳ, ನಿಂಗಪ್ಪ ಜಾಲಿಹುಡಾ, ಸಣ್ಣ ಶೇಖರಪ್ಪ ಗದ್ದಿ, ಹನುಮಂತಪ್ಪ ಬಂಡ್ರಾಳ, ಹನುಮೇಶ ಪೂಜಾರಿ ಇತರರಿದ್ದರು.