

ಕನಕಗಿರಿ: ಪಟ್ಟಣ ಸೇರಿ ತಾಲೂಕು ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆ.ಕಾಟಾಪುರ ಸೇರಿ ಇತರೆಡೆ ಭತ್ತ ನೆಲಕ್ಕಚ್ಚಿದ್ದು, ಪಟ್ಟಣದಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ.
ಆಗಾಗ ಸುರಿಯುವ ಮಳೆಯಿಂದ ಬೆಳೆಗಳು ಹಾಳಾಗುವ ಆತಂಕ ರೈತರಿಗೆ ಎದುರಾಗಿದೆ. ಈಗಾಗಲೇ ತೊಗರಿ ಬೆಳೆ ಹೂ ಕಟ್ಟಿದ್ದು, ಕಾಯಿ ಬಿಡುವ ಸಮಯವಾಗಿದೆ. ಅಲ್ಲದೇ, ಭತ್ತ ಫಸಲು ಕಟ್ಟಿದ್ದು ಮಳೆಯಿಂದ ನೆಲಕ್ಕೊರಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ ರೈತರಲ್ಲಿದೆ.
ತಾಲೂಕಿನ ಕೆ.ಕಾಟಾಪುರ ಸೇರಿ ಚಿಕ್ಕಡಂಕನಕಲ್ ಬಳಿ ಅಲ್ಲಲ್ಲಿ ಭತ್ತದ ಬೆಳೆ ನೆಲಕ್ಕೊರಗಿದೆ. ಪಟ್ಟಣದ 7ನೇ ವಾರ್ಡಿನ ಫರ್ವಿನ್ ಬೇಗಂ ಎನ್ನುವವರ ಮನೆ ಭಾಗಶಃ ಕುಸಿದು ಬಿದ್ದಿದೆ. ಹಾನಿಯಾದ ವರದಿ ಪಡೆಯಲಿಕ್ಕೆ ಅಧಿಕಾರಿಗಳು ಮುಂದಾದರೂ ಆಗಾಗ ಮಳೆ ಸುರಿಯುತ್ತಿರುವುದರಿಂದ ಹಾನಿ ಸರ್ವೇಗೂ ಕಷ್ಟವಾಗುತ್ತಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹವಾಮಾನ ಇಲಾಖೆ ಇನ್ನಷ್ಟು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದ್ದರಿಂದ ರೈತರಿಗೆ ಬೆಳೆ ಉಳಸಿಕೊಳ್ಳುವ ಚಿಂತೆ ಕಾಡುತ್ತಿದೆ.