

ಕನಕಗಿರಿ: ಎರಡೂವರೆ ವರ್ಷಗಳ ಬಳಿಕ ರಾಜ್ಯದ ಹಲವು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅಧಿಕಾರ ನೀಡಲು ಸರ್ಕಾರ ಮುಂದಾಗಿದ್ದು, ಕರಡು ಅಧಿಸೂಚನೆ ಹೊರಡಿಸಿರುವುದರಿಂದ ಇಲ್ಲಿನ ಪಪಂ ನೂತನ ಸದಸ್ಯರ ಮುಖದಲ್ಲಿ ಸಂತಸ ಮೂಡಿದೆ.
ಇಲ್ಲಿನ ಪಟ್ಟಣ ಪಂಚಾಯಿತಿಯ 17 ಸ್ಥಾನಗಳಿಗೆ 2021 ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 12 ಕಾಂಗ್ರೆಸ್ ಹಾಗೂ 5 ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆತಿದ್ದರಿಂದ ಚುನಾವಣೆಯಲ್ಲಿ ಜಯಶೀಲರಾಗಿದ್ದ ಸದಸ್ಯರು, ಮೀಸಲಾತಿ ನಿಗದಿಯಾದರೆ ಅಧ್ಯಕ್ಷ ಗಾದಿಗೆ ನಾನು ನೀನು ಎನ್ನುವ ಪೈಪೋಟಿಯಲ್ಲಿದ್ದರು.
ಆದರೆ, ಚುನಾವಣೆ ಮುಗಿದು ಎರಡೂವರೆ ವರ್ಷವಾದರೂ ಮೀಸಲಾತಿ ನಿಗದಿಯಾಗಿರಲಿಲ್ಲ. ನೂತನ ಪಪಂ ಸದಸ್ಯರಿಗೆ ಅಧಿಕಾರ ಎನ್ನುವುದು ಕನ್ನಡಿಯೊಳಗಿನ ಗಂಟಾಗಿತ್ತು. ಈ ನಡುವೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗುತ್ತದೆ ಎನ್ನುವ ಚರ್ಚೆಗಳು ನಡೆದಿದ್ದರಿಂದ ಎಲ್ಲ ಸದಸ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು.
ಈ ನಡುವೆ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ಬಳಿಕ 61 ನಗರಸಭೆ, 123 ಪುರಸಭೆ ಹಾಗೂ 117 ಪಟ್ಟಣ ಪಂಚಾಯಿತಿಗಳಿಗೆ ಕರಡು ಅಧಿಸೂಚನೆ ಹೊರಡಿಸಿದ್ದರಿಂದ ಬಹುದಿನಗಳ ಬಳಿಕ ಸದಸ್ಯರಿಗೆ ಅಧಿಕಾರದ ಆಸೆ ಚಿಗುರೊಡೆದಿದ್ದು, ನಾವು ಅಧಿಕಾರಕ್ಕೆ ಬರುವ ದಿನಗಳು ಹತ್ತಿರವಾದವೆಂಬ ಖುಷಿಯಲ್ಲಿದ್ದಾರೆ.
ವಿವಿಧ ವಾರ್ಡುಗಳಿಂದ ಆಯ್ಕೆಯಾದ ಸದಸ್ಯರಿಗೆ ಅಧಿಕಾರವಿಲ್ಲದಿದ್ದರಿಂದ ವಾರ್ಡ್‌ವಾಸಿಗಳ ಬೇಡಿಕೆ ಅನುಸಾರ ಮೂಲ ಸೌಲಭ್ಯಗಳನ್ನು ಒದಗಿಸಲು ಕಷ್ಟವಾಗಿತ್ತು. ಆದರೂ, ಸದಸ್ಯರೇ ಸೌಕರ್ಯ ಒದಗಿಸುವಲ್ಲಿ ಪ್ರಯತ್ನ ಮಾಡಿದ್ದರು.
ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಮೊದಲ ಎರಡೂವರೆ ವರ್ಷ ಅಧ್ಯಕ್ಷ ಸ್ಥಾನವು ಎಸ್ಸಿ, ಎರಡನೇ ಅವಧಿಗೆ ಹಿಂವಅಗೆ ಮೀಸಲಾಗಿತ್ತು. ಎರಡೂ ಅವಧಿಯಲ್ಲಿ ಮೂವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಎರಡನೇ ಚುನಾವಣೆಯ ಮೊದಲ ಅವಧಿಗೆ ಯಾವ ವರ್ಗಕ್ಕೆ ಮೀಸಲಾಗಬಹುದು ಎನ್ನುವ ಚರ್ಚೆಗಳು ನಡೆದಿವೆ.
ಆಡಳಿತ ಸದಸ್ಯರಿಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆಯಾಗಿದೆ. ಕೆಲ ವಾರ್ಡುಗಳಲ್ಲಿ ನೀರಿನ ಅಭಾವ ತಲೆದೂರಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಭಾರ ಇದ್ದುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಇದೀಗ ಕರಡು ಅಧಿಸೂಚನೆ ಹೊರಡಿಸಿರುವುದು, ಖುಷಿ ತಂದಿದೆ.ಕಂಠಿರಂಗ ನಾಯಕ5ನೇ ವಾರ್ಡ್ ಸದಸ್ಯ, ಕನಕಗಿರಿ