

ಕನಕಗಿರಿ: ಫೆ.8- 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ಕನಕಾಚಲಪತಿ ದೇವಸ್ಥಾನದ ಯಾತ್ರಿ ನಿವಾಸದಲ್ಲಿ ಶನಿವಾರ ಆಯೋಜಿಸಿದ್ದ ವಾಲ್ಮೀಕಿ ಜಾತ್ರೆ ನಿಮಿತ್ತ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ಬರೆದಿದ್ದು, ಅದರಲ್ಲಿ ವಾಲ್ಮೀಕಿಯ ಚರಿತ್ರೆ ಇದೆ. ಅಣ್ಣ, ತಮ್ಮ ಒಂದಾಗಿದ್ದರೇ ಅದು ರಾಮಾಯಣ, ಇಲ್ಲದಿದ್ದರೇ ಮಹಾಭಾರತವಾಗಲಿದೆ. ಅದಕ್ಕಾಗಿ ಅಧಿಕಾರ, ಆಸ್ತಿಗಾಗಿ ಸಹೋದರರ ನಡುವೆ ಜಗಳ ಮಾಡುವುದು ಬೇಡ ಎಂದರು.
ವಾಲ್ಮೀಕಿ ಸಮಾಜವು ರಾಜ್ಯದ ಜನಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ. ನಮ್ಮ ಸಮುದಾಯದವರ ಮೂಲ ಕಸಬು ಬೇಟೆಯಾಡುವುದು. ಆದರೆ, ಸಂವಿಧಾನ ರಚಿಸುವಾಗ ಅಂಬೇಡ್ಕರ್ ಪ್ರಾಣಿ ಹಿಂಸೆ ಅವಕಾಶ ನೀಡದಿದ್ದರಿಂದ ನಮ್ಮಗಳ ಮೂಲ ಕಸಬು ನಿಲ್ಲಿಸಲಾಗಿದೆ. ಆದರೆ ಕುಲ ಕಸುಬು ಬಿಟ್ಟ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಲು ರಾಜಕೀಯ ಪಕ್ಷಗಳು ಮೀನಮೇಷ ಎಣಿಸಿದವು. ಆರ್ಥಿಕ ಮೀಸಲಾತಿಗೆ ಶೇ. 3ರಿಂದ ಶೇ.7 ಮೀಸಲಾತಿ ಪಡೆಯಲು ಹೋರಾಟ ಮಾಡಲಾಯಿತು. ಜನಸಂಖ್ಯೆಯ ಅನುಗುಣವಾಗಿ ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡಲಿಲ್ಲ ಎಂದರು.
ವಾಲ್ಮೀಕಿ ಹಗರಣದ ಬಗ್ಗೆ ನಿರ್ಲಕ್ಷ್ಯ ವಹಿಸಿಲ್ಲ: ಸಮಾಜದ ಯುವಕ ಹನುಮೇಶ ನಾರಾಯಣಿ ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ 187ಕೋಟಿ ರೂ. ಹಗರಣ ನಡೆದಾಗ ಶ್ರೀಗಳು ನಿರ್ಲಕ್ಷ್ಯ ಮಾಡಿದರು ಎಂದು ಆರೋಪಿಸಿದರು. ಪ್ರಸನ್ನಾನಂದ ಪುರಿ ಮಾತನಾಡಿ, ವಾಲ್ಮೀಕಿ ಹಗರಣದಲ್ಲಿ ವಿರೋಧ ಪಕ್ಷದವರು ಹೋರಾಟ ಮಾಡಿದ್ದು, ನಂತರ ಮುಡಾ ಹಗಹರಣ ಹೋರಾಟ ನಡೆಯಿತು.
ಆದರೆ, ವಾಲ್ಮೀಕಿ ಹಗರಣ ತಾರ್ಕಿಕ ಅಂತ್ಯ ಕಾಣಲಿಲ್ಲ. ಆದರೂ ನಮ್ಮ ಪರವಾಗಿ ಪ್ರತಿ ಪಕ್ಷ ಹೋರಾಟ ಮಾಡಿದೆ. ಸಮಾಜ ಹಾಗೂ ಗುರುಗಳು ನಿರ್ಲಕ್ಷ್ಯವಹಿಸಿಲ್ಲ. ಶಾಸಕರು, ಮಂತ್ರಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಾಲ್ಮೀಕಿ ಹಗರಣದ ಬಗ್ಗೆ ಚರ್ಚಿಸಲಾಗಿದೆ. ಬೇಲಿಯೇ ಎದ್ದು ಹೋಲ ಮೇಯ್ದಿದೆ. 73 ಕೋಟಿ ಹಣ ರೂ. ವಸೂಲಿಯಾಗಿದ್ದು, ಬಾಕಿ ಹಣ ಬರಲಿದೆ. ಈ ಬಗ್ಗೆ ಸಿಎಂ ಬಳಿ ತೆರಳಿ ಮಾಹಿತಿ ನೀಡಲಾಗಿದೆ ಎಂದರು.
ಪ.ಪಂ.ಉಪಾಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ನಾಗರಾಜ ಇದ್ಲಾಪುರ, ಮಾರುತಿ ತೋಟಗಂಟಿ, ನಿಂಗಪ್ಪ ನಾಯಕ, ಬೆಟ್ಟಪ್ಪ ಜೀರಾಳ, ನಾಗೇಶ ನಾಯಕ, ಹುಲಿಗೆಮ್ಮ ನಾಯಕ, ಶರಣಪ್ಪ ಸೋಮಸಾಗರ, ನಾಗರಾಜ ತೆಗ್ಯಾಳ ಇತರರಿದ್ದರು.